ಕುಕ್ಕೆ ಸುಬ್ರಹ್ಮಣ್ಯಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಅಣ್ಣಾಮಲೈ
ಜಿಲ್ಲಾ ಸುದ್ದಿರಾಜಕೀಯ


ಕುಕ್ಕೆ ಸುಬ್ರಹ್ಮಣ್ಯ: ತಮಿಳುನಾಡಿನ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ. ಅಣ್ಣಾಮಲೈ ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು, ದೇವರ ದರ್ಶನ ಪಡೆದರು.
ಅಣ್ಣಾಮಲೈ ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪತ್ನಿ, ಮಕ್ಕಳು ಹಾಗೂ ಇತರೆ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ ನಂತರ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ ”ನಾನು ಕಳೆದ ಹತ್ತು ಹದಿನೈದು ವರ್ಷಗಳಿಂದ ಕುಕ್ಕೆ ಕ್ಷೇತ್ರಕ್ಕೆ, ಸ್ವಾಮೀಜಿಗಳ ಬಳಿ ಬರುತ್ತಿದ್ದೇನೆ. ಆಶ್ಲೇಷ ನಕ್ಷತ್ರದ ಈ ಪುಣ್ಯದಿನದಂದು ದೇವರಲ್ಲಿ ತಮಿಳುನಾಡು, ಕರ್ನಾಟಕ ಮಾತ್ರವಲ್ಲದೆ ಸಮಗ್ರ ಭಾರತದ ಜನರು ಸುಖ ಶಾಂತಿ ನೆಮ್ಮದಿಯಿಂದ ಇರಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು.
ಈ ಕ್ಷೇತ್ರವು ಪರಶುರಾಮ ಸೃಷ್ಟಿಯ ಕ್ಷೇತ್ರವಾಗಿದ್ದು, ಸುಮಾರು 5000 ವರ್ಷಗಳ ಇತಿಹಾಸವಿದೆ. ಸಾವಿರಾರು ಭಕ್ತರು ನಂಬಿಕೆಯಿಂದ ಇಲ್ಲಿ ಬಂದು ದೇವರಲ್ಲಿ ಶರಣಾಗುತ್ತಾರೆ. ಈ ಬಾರಿ ಕೂಡ ನಾನು ಸ್ವಾಮೀಜಿಗಳ ಆಶೀರ್ವಾದ ಪಡೆದು ಮನಸ್ಸಿಗೆ ನೆಮ್ಮದಿ ಕಂಡು ವಾಪಸ್ಸಾಗುತ್ತಿದ್ದೇನೆ ಎಂದರು.