ಮೈಸೂರು: ಎಂಟು ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಭೌತಿಕವಾಗಿ ಇಲ್ಲದಿದ್ದರೂ ಕನ್ನಡಿಗರ ಹೃದಯದಲ್ಲಿದ್ದಾನೆ- ಖಂಡ್ರೆ.
ಜಿಲ್ಲಾ ಸುದ್ದಿರಾಜ್ಯ


ಮೈಸೂರು: ಎಂಟು ಬಾರಿ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಇಂದು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ,ಎಲ್ಲ ಕನ್ನಡಿಗರ ಹೃದಯದಲ್ಲಿ ನೆಲೆಸಿದ್ದಾನೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಡಿ.ಬಿ. ಕುಪ್ಪೆಯ ಬಳ್ಳೆ ಶಿಬಿರದಲ್ಲಿ ಅರ್ಜುನನ ಪ್ರತಿರೂಪದಂತಿರುವ ಸ್ಮಾರಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾಪ್ಟನ್ ಎಂದೇ ಖ್ಯಾತನಾಗಿದ್ದ ಅರ್ಜುನ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು ಯಸಳೂರು ಬಳಿ ಮದಗಜ ಸೆರೆ ಕಾರ್ಯಾಚರಣೆ ವೇಳೆ 2023ರ ಡಿಸೆಂಬರ್ 4ರಂದು ಏಕಾಂಗಿಯಾಗಿ ಹೋರಾಡಿ ಮಡಿದ. ಮಾವುತ ಮತ್ತು ಹಲವು ಅರಣ್ಯ ಸಿಬ್ಬಂದಿಯ ಜೀವ ಉಳಿಸಿ ತನ್ನ ಜೀವ ಬಲಿಕೊಟ್ಟ. ಅರ್ಜುನನ ಅಗಲಿಕೆಯ ನೋವು ನಿರಂತರವಾಗಿ ಕಾಡುತ್ತದೆ ಎಂದರು.
ದಸರಾ ಮಹೋತ್ಸವದಲ್ಲಿ 8 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಜನಮನ ಗೆದ್ದಿದ್ದ ಅರ್ಜುನ ಸುಮಾರು 5600 ಕೆ.ಜಿ. ತೂಕವಿದ್ದ. ಅರ್ಜುನ 2023ರ ಡಿಸೆಂಬರ್ 4ರಂದು ಮೃತಪಟ್ಟಾಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿತ್ತು ಅರ್ಜುನ ಮೃತದೇಹವನ್ನು ಬಳ್ಳೆಗೆ ತಂದು ಸಮಾಧಿ ಮಾಡಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದರೆ ಮೃತ ಆನೆಯನ್ನು ನೂರಾರು ಕಿಲೋ ಮೀಟರ್ ತಂದು ಸಮಾಧಿ ಮಾಡುವುದು ಕಷ್ಟಸಾಧ್ಯ. ದೇಹದಲ್ಲಿ ಗಾಳಿ ಸೇರಿ ಸ್ಫೋಟವಾಗುವ ಭೀತಿ ಇತ್ತು. ಹೀಗಾಗಿ ಯಸಳೂರು ಬಳಿಯ ದಬ್ಬಳ್ಳಿಕಟ್ಟೆಯ ನೆಡುತೋಪಿನಲ್ಲಿ ಸಮಾಧಿ ಮಾಡಲಾಯಿತು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಯಸಳೂರಿನ ದಬ್ಬಳ್ಳಿಕಟ್ಟೆಯಲ್ಲಿ ಸಮಾಧಿ ಮಾಡಿದ ಅರ್ಜುನನ ನೆನಪಿಗಾಗಿ ಈಗ ಬಳ್ಳೆ ಶಿಬಿರದಲ್ಲಿ 650 ಕೆ.ಜಿ ತೂಕದ, 2.98 ಮೀ ಎತ್ತರದ, 3.74 ಮೀ ಉದ್ದದ ಸ್ಮಾರಕವನ್ನು ಕಲಾವಿದ ಧನಂಜಯ ಅವರು ಕಬ್ಬಿಣದ ಮೂಲಕ ಅದ್ಭುತವಾಗಿ ನಿರ್ಮಿಸಿದ್ದಾರೆ. ಈ ಸ್ಮಾರಕ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ, ಅರ್ಜುನನ ಸಾಹಸ ಹಾಗೂ ದಸರಾ ಮಹೋತ್ಸವದ ಅಪರೂಪದ ಕ್ಷಣಗಳ ನೋಟವನ್ನು ಸಾರ್ವಜನಿಕರಿಗೆ ತಲುಪಿಸಲಿದೆ.