ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಾವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ
ಸ್ಥಳೀಯ ಸುದ್ದಿ


ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನವೋದಯ ಚಾರಿಟೆಬಲ್ ಟ್ರಸ್ಟ್ನ ನವೋದಯ ಗ್ರಾಮೀಣ ಆರೋಗ್ಯ ಮತ್ತು ಪರಿಸರ ಅಧ್ಯಯನ ಕೇಂದ್ರದ ವತಿಯಿಂದ ತಾಲ್ಲೂಕಿನ ರಾಜಘಟ್ಟದ ಮಾರುತಿ ಪ್ರೌಢ ಶಾಲೆ ಹಾಗೂ ಎಸ್ ಜೆ ಸಿ ಎಸ್ ಶಾಲೆಯ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಹಾವುಗಳ ಬಗ್ಗೆ ವೈಜ್ಞಾನಿಕ ತಿಳಿವಳಿಕೆ ನೀಡುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ.ಹರಿಣಿ ಮತ್ತು ಡಾ. H.S ಪರಮೇಶ್ವರ ಅವರು ತುರ್ತು ಪರಿಸ್ಥಿತಿಗಳಲ್ಲಿ ನೀಡಬೇಕಾದ ಪ್ರಾಥಮಿಕ ಚಿಕಿತ್ಸೆಗಳ ಕುರಿತು ವಿದ್ಯಾರ್ಥಿಗಳಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಜೊತೆಗೆ ಆಸ್ಪತ್ರೆಗಳ ವಿವಿಧ ವಿಭಾಗಗಳ ಕಾರ್ಯವಿಧಾನ ಮತ್ತು ಸಮಯಕ್ಕೆ ಸರಿಯಾಗಿ ಔಷಧೋಪಚಾರ ಪಡೆಯುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿದರು.
WWF ಇಂಡಿಯಾದ ಲೋಹಿತ್ ವೈ.ಟಿ ಹಾವುಗಳ ಬಗ್ಗೆ ಸಮಗ್ರ ಉಪನ್ಯಾಸ ನೀಡಿದರು. ವಿಷಕಾರಿ ಹಾಗೂ ವಿಷರಹಿತ ಹಾವುಗಳ ನಡುವಿನ ವ್ಯತ್ಯಾಸ, ಅವುಗಳ ಜೀವನಶೈಲಿ, ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಮತ್ತು ವೈಜ್ಞಾನಿಕ ನಿಜಾಂಶಗಳು, ನಮ್ಮ ಸುತ್ತಮುತ್ತ ಸಾಮಾನ್ಯವಾಗಿ ಕಾಣುವ ಹಾವುಗಳನ್ನು ಗುರುತಿಸುವ ವಿಧಾನಗಳನ್ನು ವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು, ನವೋದಯ ಟ್ರಸ್ಟ್ ಸಂಯೋಜಕರಾದ ಜನಾರ್ಧನ್ , ಮಾರುತಿ ಪ್ರೌಢ ಶಾಲೆ ಪ್ರಾಂಶುಪಾಲರಾದ ಪವನಾ, ಮುಖ್ಯೋಪಾಧ್ಯಾಯರಾದ ಕೃಷ್ಣಮೂರ್ತಿ, ಬಿಜೆಸಿಎಸ್ ಸಂಸ್ಥೆಯ ಪ್ರಾಂಶುಪಾಲರಾದ ವಿಜಯಕುಮಾರ್, ಸುರನಾ ಕಾಲೇಜಿನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಾ ಬಿ.ಕೆ., ಪ್ರೇರಣಾ ವಿ. ಮತ್ತು ವೈಷ್ಣವಿ ಎಂ. ಹಾಗೂ ಶಿಕ್ಷಕರು ಭಾಗವಹಿಸಿದ್ದರು.