ಬಾಬಾ ಸಾಹೇಬ್‌ ಅಂಬೇಡ್ಕರ್ ಶೋಷಿತರ ಧ್ವನಿ: ನಲ್ಲೂರಹಳ್ಳಿ ನಾಗೇಶ್.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ

4/15/20251 min read

ಮಹದೇವಪುರ: ಸಮಾಜದ ಕಟ್ಟಕಡೆಯ ಪ್ರಜೆಗೂ ಶಾಸನ ರೂಪಿಸುವ ರಾಜಕೀಯದ ಹಕ್ಕು ಕೊಟ್ಟಿರುವ ಮಹಾ ಮಾನವತಾವಾದಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಲ್ಲೂರಹಳ್ಳಿ ನಾಗೇಶ್ ತಿಳಿಸಿದರು.

ಕ್ಷೇತ್ರದ ನಲ್ಲೂರಹಳ್ಳಿ ಗ್ರಾಮದ ಅಂಬೇಡ್ಕರ್ ಪುತ್ಥಳಿಗೆ ಮಾಲರ್ಪಣೆ ಮಾಡಿ ಮಾತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನು ಪ್ರತಿ ವರ್ಷ ನಮ್ಮ ಗ್ರಾಮದಲ್ಲಿ ಶಾಲಾ ಮಕ್ಕಳ ಜೊತೆಗೆ ಅದ್ದೂರಿಯಾಗಿ ಆಚರಣೆ ಮಾಡುತ್ತಾ ಬರುತ್ತಿರುವುದು ಸಂತಸ ತಂದಿದೆ ಎಂದರು. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಒಬ್ಬ ಆಧ್ಯಾತ್ಮಿಕ ನಾಯಕ.ಇವತ್ತು ಶೋಷಿತರು,ದಲಿತರು ಮುಖ್ಯ ವಾಹಿನಿಗೆ ಬರಲು ಅವರು ಕಾರಣಕರ್ತರು. ಅವರನ್ನು ದೇಶದ ಪ್ರತಿಯೊಬ್ಬರು ಸ್ಮರಣೆ ಮಾಡುವುದು,ಅವರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವುದು ಆಧ್ಯ ಕರ್ತವ್ಯವಾಗಿದೆ ಎಂದರು.

ಶಾಲಾ ಮಕ್ಕಳನ್ನು ಸಾಂಸ್ಕೃತಿಕವಾಗಿ ಹದಗೊಳಿಸಿ ಅವರಿಗೆ ಬೇರೆ ಬೇರೆ ವಿಚಾರಗಳ ಕಡೆಗೆ ಗಮನ ಹರಿಸಲು ಸಹಕಾರ ನೀಡಿದರೆ ಓದಿನೊಂದಿಗೆ ಹಲವು ವಿಚಾರಗಳ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ .ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಅಂಬೇಡ್ಕರ್ ಅವರು ಮಾದರಿಯಾಗಬೇಕೆಂದು ಸಲಹೆ ಮಾಡಿದರು.

ಅಂಬೇಡ್ಕರ್ ಜಯಂತಿ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿಯನ್ನ ಏರ್ಪಡಿಸಲಾಗಿತ್ತು. ಮೊದಲ ಬಹುಮಾನ ಪಡೆದ ತಂಡಕ್ಕೆ ಒಂದು ಟಗರು ಕುರಿ ಮತ್ತು 10 ಸಾವಿರ ರೂಪಾಯಿ, ಎರಡನೇ ಬಹುಮಾನ ಪಡೆದ ತಂಡಕ್ಕೆ ಒಂದು ಫೈಟರ್ ಕೋಳಿ ಮತ್ತು 7500 ರೂಪಾಯಿ ಬಹುಮಾನ ನೀಡಲಾಯಿತು. ಮೂರನೇ ತಂಡಕ್ಕೆ 5 ಸಾವಿರ ರೂಪಾಯಿ ನಗದು ನೀಡಲಾಯಿತು ಎಂದು ತಿಳಿಸಿದರು.

ಸಂವಿಧಾನ ಶಿಲ್ಪಿ‌ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಯೂತ್ ಕಾಂಗ್ರೆಸ್ ಹಮ್ಮಿಕೊಂಡ ಕಾರ್ ರ್ಯಾಲಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗೋವರ್ಧನ್ ಕೆ.ಚಂದ್ರಶೇಖರ ರೆಡ್ಡಿ, ಗೋವಿಂದರಾಜು,ನಾಗರಾಜ್, ಕೆ.ನಾಗರಾಜ್,ಎಲ್.ಹರೀಶ್ ರೆಡ್ಡಿ, ಅಭಿ,ಅಭಿಲಾಷ್,ಎಸ್ ಎಲ್ ಎನ್ ಚಂದ್ರು,ವಿನೋದ,ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.