Bank Janardhan Passed away: ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ವಿಧಿವಶ: ಕಂಬನಿ ಮಿಡಿದ HDK

ರಾಜ್ಯ

Raghavendra H.A

4/14/20251 min read

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜನರನ್ನು ನಕ್ಕು-ನಲಿಸಿದ ಬ್ಯಾಂಕ್‌ ಜನಾರ್ಧನ್‌ (76) ನಿಧನರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್‌ ಜನಾರ್ಧನ್‌ ಕೊನೆಯುಸಿರೆಳೆದಿದ್ದಾರೆ.

ಸುಲ್ತಾನ್‌ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 – 4 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕೆಲ ತಿಂಗಳ ಹಿಂದಷ್ಟೇ ಬ್ಯಾಂಕ್ ಜನಾರ್ಧನ ಅವರಿಗೆ ಹೃದಯಾಘಾತವಾಗಿತ್ತು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದರು. ಕನ್ನಡ ಸಿನಿಮಾ, ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಜನಾರ್ದನ್. ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ಹಾಸ್ಯ ನಟರಾಗಿ ಜನಾರ್ದನ್ ಮಿಂಚಿದ್ರು. 80, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ್‌ ಉಪೇಂದ್ರ ನಿರ್ದೇಶನದ ಶ್ ಸಿನಿಮಾ, ತರ್ಲೆ ನಾನ್ ಮಗ , ಬೆಳ್ಳಿಯಪ್ಪ ಬಂಗಾರಪ್ಪ , ಗಣೇಶ ಸುಬ್ರಹ್ಮಣ್ಯ, ಗೌರವ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಬ್ಯಾಂಕ್ ಜ​ನಾರ್ಧನ್ ಗಮನ ಸೆಳೆದಿದ್ದಾರೆ.

ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್​ ನಿಧನಕ್ಕೆ ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ಕಂಬನಿ ಮಿಡಿದಿದ್ದಾರೆ. ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡಿರುವ ಅವರು, ಕನ್ನಡ ಚಿತ್ರರಂಗದ ಹಿರಿಯ ನಟರು, ಸುಮಾರು ಐನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅನೇಕ ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ಧ ಶ್ರೀ ಬ್ಯಾಂಕ್ ಜನಾರ್ಧನ್ ಅವರ ನಿಧನದ ವಾರ್ತೆ ಕೇಳಿ ಬಹಳ ದುಃಖವಾಯಿತು.

ತಮ್ಮ ಅಭಿನಯದಿಂದ ಪ್ರೇಕ್ಷಕರಲ್ಲಿ ಕಚಗುಳಿಯ ಕಡಲನ್ನೇ ಉಕ್ಕಿಸುತ್ತಿದ್ದ ಜನಾರ್ಧನ್ ಅವರು, ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದ್ದರು. ಆ ಪಾತ್ರದ ಮೂಲಕ ಎಲ್ಲರನ್ನೂ ಸಮ್ಮೋಹನಗೊಳಿಸುತ್ತಿದ್ದರು. ಅವರ ನಿಧನ ನಮ್ಮ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ.

ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ, ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಎಂದು ಪ್ರತಿಕ್ರಿಯಿಸಿದ್ದಾರೆ.