ಐಪಿಎಲ್ ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ಮಾಡಿದ ಬಿಸಿಸಿಐ.
ಕ್ರೀಡೆಸ್ಥಳೀಯ ಸುದ್ದಿ


ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಆರ್ ಸಿಬಿ ವಿಜಯೋತ್ಸವ ದುರಂತ ಬೆನ್ನಲ್ಲೇ ಬಿಸಿಸಿಐ ದೊಡ್ಡದೊಂದು ಬದಲಾವಣೆಯ ನಿರ್ಧಾರಕ್ಕೆ ಬಂದಿದ್ದಾರೆ. ವಿಜಯೋತ್ಸವದಂಥಾ ಸಂದರ್ಭಗಳನ್ನು ಸೂಕ್ತವಾಗಿ ನಿಭಾಯಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯದ ಅನಾಹುತಗಳನ್ನು ತಪ್ಪಿಸಲು ಬಿಸಿಸಿಐ ಮುಂದಾಗಿದೆ.
ಬೆಂಗಳೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿ ಅಂತರ ಕಾಯ್ದುಕೊಂಡಿದ್ದ ಬಿಸಿಸಿಐ, ಬಳಿಕ ಇಂಥ ಸಂಭ್ರಮಾಚರಣೆಯ ವೇಳೆ ದುರಂತವನ್ನು ತಪ್ಪಿಸಲು ಮಾರ್ಗಸೂಚಿ ರಚಿಸುವುದಕ್ಕಾಗಿ ತ್ರಿಸದಸ್ಯ ಸಮಿತಿಯನ್ನು ರಚಿಸಿತ್ತು. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಖಜಾಂಚಿ ಪ್ರಭ್‌ತೇಜ್ ಸಿಂಗ್ ಭಾಟಿಯಾ ಈ ಸಮಿತಿಯಲ್ಲಿದ್ದರು. ಈ ಬಗ್ಗೆ ಬಿಸಿಸಿಐ ಪ್ರಸ್ತಾಪ ಮುಂದಿಟ್ಟಿದ್ದು, ಯಾವಾಗ ಜಾರಿಗೊಳಿಸಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಇಂಡಿಯಾ ಟುಡೇ ಜತೆ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಕಾಲ್ತುಳಿತದಂತಹ ಅವಘಡ ಭವಿಷ್ಯದಲ್ಲಿ ಮರುಕಳಿಸದಂತೆ ಬಿಸಿಸಿಐ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ' ಎಂದಿದ್ದಾರೆ. ಇನ್ನು ಮುಂದೆ ತಂಡಗಳು ಸಂಭ್ರಮಾಚರಣೆ ಸೇರಿದಂತೆ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಿದ್ದರೆ ಅದಕ್ಕೆ ಸರ್ಕಾರ, ಬಿಸಿಸಿಐ, ಪೊಲೀಸ್ ಇಲಾಖೆಯ ಅನುಮತಿ ಅಗತ್ಯ. ಜೊತೆಗೆ 4ರಿಂದ 5 ಹಂತದ ಭದ್ರತಾ ವ್ಯವಸ್ಥೆ ಕೂಡಾ ಜಾರಿಗೊಳಿಸಬೇಕು ಎಂದು ಬಿಸಿಸಿಐ ತಿಳಿಸಿದೆ.
ಬಿಸಿಸಿಐ ರೂಪಿಸಿರುವ ನಿಯಮಗಳೇನು?
1) ಪ್ರಶಸ್ತಿ ಗೆದ್ದ 3ರಿಂದ 4 ದಿನಗಳ ಒಳಗೆ ಯಾವುದೇ ತಂಡಕ್ಕೆ ಸಂಭ್ರಮಾಚರಣೆಗಳನ್ನು ನಡೆಸಲು ಅವಕಾಶವಿರುವುದಿಲ್ಲ.
2) ಆತುರದ ಹಾಗೂ ಕಳಪೆ ನಿರ್ವಹಣೆ ಕಾರ್ಯಕ್ರಮಗಳನ್ನು ತಪ್ಪಿಸಲು ತ್ವರಿತ ಬದಲಾವಣೆ ಅನುಮತಿಸಲಾಗುವುದಿಲ್ಲ.
3) ಯಾವುದೇ ಆಚರಣೆಯನ್ನು ಆಯೋಜಿಸುವ ಮೊದಲು ತಂಡಗಳು ಬಿಸಿಸಿಐನಿಂದ ಔಪಚಾರಿಕ ಅನು ಮತಿಯನ್ನು ಪಡೆಯಬೇಕು.
4) ಮಂಡಳಿಯಿಂದ ಪೂರ್ವ ಲಿಖಿತ ಅನುಮತಿಯಿಲ್ಲದೆ ಯಾವುದೇ ಕಾರ್ಯಕ್ರಮಗಳನ್ನು ನಡೆಸುವ ಹಾಗಿಲ್ಲ.
5) ಕಡ್ಡಾಯ 4 ರಿಂದ 5 ಹಂತದ ಭದ್ರತಾ ಪ್ರೋಟೋಕಾಲ್ ಪಾಲಿಸಬೇಕು.
6) ಎಲ್ಲಾ ಸ್ಥಳಗಳಲ್ಲಿ ಮತ್ತು ಮೆರವಣಿಗೆ ನಡೆಯುವ ಮಾರ್ಗದಲ್ಲಿ ಹೆಚ್ಚಿನ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಬೇಕು.
7) ಈ ಭದ್ರತಾ ವ್ಯವಸ್ಥೆಗಳು ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ಸ್ಥಳದವರೆಗೂ ಜಾರಿಯಲ್ಲಿರಬೇಕು.
8) ಕಾರ್ಯಕ್ರಮದ ವೇಳಾಪಟ್ಟಿಯ ಉದ್ದಕ್ಕೂ ಆಟಗಾರರು ಮತ್ತು ಸಿಬ್ಬಂದಿಗೆ ಸಂಪೂರ್ಣ ರಕ್ಷಣೆಯನ್ನು ನೀಡಬೇಕು.
9) ಇನ್ನು ಜಿಲ್ಲಾ ಪೊಲೀಸ್, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಂದ ಅನುಮತಿಯನ್ನು ಪಡೆದಿರಬೇಕು.
10) ಆಚರಣೆಗಳನ್ನು ಕಾನೂನುಬದ್ಧವಾಗಿ ಮತ್ತು ಸುರಕ್ಷಿತವಾಗಿ ನಡೆಸಲು ನಾಗರಿಕರು ಮತ್ತು ಕಾನೂನು ಜಾರಿ ಸಂಸ್ಥೆಗಳಿಂದ ಹಸಿರು ನಿಶಾನೆ ಪಡೆಯಬೇಕು.