ಕೆ.ಆರ್.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯ ರೋಗ ತಡೆಗೆ ಬಿಸಿಜಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ.
ಸ್ಥಳೀಯ ಸುದ್ದಿ


ಕೆ.ಆರ್. ಪುರ : ಕರ್ನಾಟಕದ 16 ಜಿಲ್ಲೆಗಳಲ್ಲಿ ಕ್ಷಯ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ವಯಸ್ಕರಿಗೆ ಬಿಸಿಜಿ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ತಿಳಿಸಿದರು.
ಕೆಆರ್ ಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಯಸ್ಕರಿಗೆ ಬಿಸಿಜಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಲಸಿಕೆ ನೀಡುವುದರ ಮುಖಾಂತರ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು ಎಂದರು.
ಈ ಹಿಂದೆ ಕೇವಲ ಮಕ್ಕಳಿಗೆ ಮಾತ್ರ ಬಿಸಿಜಿ ಲಸಿಕೆ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ವಯಸ್ಕರಲ್ಲೂ ಕ್ಷಯ ರೋಗ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಇದನ್ನು ತಡೆಗಟ್ಟುವ ಸಲುವಾಗಿ ವಯಸ್ಕರಿಗೂ ಬಿಸಿಜಿ ಲಸಿಕೆ ನೀಡಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಸಕ್ಕರೆ ಕಾಯಿಲೆ ಇರುವವರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಕ್ಷಯ ರೋಗಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವವರು, ಕ್ಷಯ ರೋಗದ ಇತಿಹಾಸ ಹೊಂದಿರುವವರು ಮತ್ತು ಧೂಮಪಾನ ಮಾಡುವವರು ಈ ಲಸಿಕೆಯನ್ನು ತಪ್ಪದೇ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್ ಅವರು ಕ್ಷಯ ರೋಗಿಗಳು ಮಾತ್ರವಲ್ಲದೆ ಧೂಮಪಾನ ಮಾಡುವವರು , ಮಧುಮೇಹ ರೋಗಿಗಳು , ಅಪೌಷ್ಟಿಕತೆ ಹೊಂದಿರುವವರು , ಟಿ.ಬಿ ಇರುವ ವ್ಯಕ್ತಿಗಳ ನಿಕಟ ಸಂಪರ್ಕ ಇವರುವವರು ಈ ಲಸಿಕೆ ಹಾಕಿಕೊಳ್ಳಬೇಕು ಎಂದು ಹೇಳಿದರು.
ಬಳಿಕ ಮಾತನಾಡಿದ ಕ್ಷಯ ರೋಗ ಪ್ರಯೋಗಾಲಯ ಹಿರಿಯ ಮೇಲ್ವಿಚಾರಕರಾದ ಮುತ್ತುರಾಮನ್ ಕ್ಷಯ ಮುಕ್ತ ಭಾರತ ಮಾಡುವ ಗುರಿಯೊಂದಿಗೆ ಸರ್ಕಾರದ ಮಾರ್ಗಸೂಚಿಯಂತೆ 18 ವರ್ಷ ಮೇಲ್ಪಟ್ಟ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನವರು ಬಿಸಿಜಿ ಲಸಿಕೆ ಹಾಕಿಸಿಕೊಳ್ಳಬಹುದು .
ಈ ಭಾಗದ ಬಸವನಪುರ, ದೇವಸಂದ್ರ ಹಾಗೂ ಕೆಆರ್ ಪುರ ವ್ಯಾಪ್ತಿಯಲ್ಲಿ ಸುಮಾರು 115 ಕ್ಷಯ ಬಾದಿತವರಿದ್ದು ಅವರ ಸಂಪರ್ಕದಲ್ಲಿರುವವರಿಗೂ ಸಹ ಈ ಲಸಿಕೆ ನೀಡಲಾಗುವುದು , ಇನ್ನೂ ಸೋಂಕಿತ ವ್ಯಕ್ತಿಗಳ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಂಡು ಲಸಿಕೆ ನೀಡಲಾಗುವುದು, ಸರ್ಕಾರದ ಈ ಸೌಲಭ್ಯ ಸದುಪಯೋಗಪಡೆಸಿಕೊಂಡು ಆರೋಗ್ಯ ವೃದ್ದಿಸಿಕೊಳ್ಳಿ ಎಂದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ನಿಮ್ಮ ಗ್ರಾಮಗಳಿಗೆ ಆಗಮಿಸಿ ಲಸಿಕೆ ನೀಡುತ್ತಾರೆ. ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಂಡು ಕ್ಷಯ ರೋಗ ಬರದಂತೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದು. ಈ ಆಂದೋಲನದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹದೇವಪುರ ವಲಯ ಆರೋಗ್ಯ ವೈದ್ಯಾಧಿಕಾರಿ ಡಾ. ವಿಶ್ವೇಶ್ವರಯ್ಯ, ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಲತಾ ಪ್ರೇಮಿಳ, ಡಾ. ಲೀಲಾ, ಡಾ. ಶೋಭಾ ಶ್ರೀನಿವಾಸರಾಜು , ಡಾ. ನಿಸರ್ಗ , ಗೋಪಾಲಕೃಷ್ಣ ,ಶ್ರೀಮತಿ ಕವಿತಾ ಬಾಯಿ, ಮತ್ತಿತರರು ಇದ್ದರು.