ಬೆಂಗಳೂರು: ಹಣ ಎಣಿಸುವಾಗ ಹಾಡಹಗಲೇ ಕುತ್ತಿಗೆಗೆ ಚಾಕು ಇಟ್ಟು, ಉದ್ಯಮಿಯ 2 ಕೋಟಿ ರೂ. ನಗದು ದರೋಡೆ.
ಕ್ರೈಮ್ಸ್ಥಳೀಯ ಸುದ್ದಿ


ಬೆಂಗಳೂರು: ಸಿನಿಮೀಯ ಸ್ಟೈಲ್ ನಲ್ಲಿ ಬಂದ ದರೋಡೆಕೋರರು ಉದ್ಯಮಿಯೊಬ್ಬರ ಎರಡು ಕೋಟಿ ರೂಪಾಯಿ ನಗದು ದರೋಡೆ ಮಾಡಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ವ್ಯಾಪ್ತಿಯ ಎಂ.ಎಸ್.ಪಾಳ್ಯದಲ್ಲಿ ನಡೆದಿದೆ.
ಉದ್ಯಮಿ ಶ್ರೀಹರ್ಷ ವಿ. ಅವರು ನೀಡಿರುವ ದೂರಿನ ಅನ್ವಯ ವಿದ್ಯಾರಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಕೆಂಗೇರಿಯ ಶ್ರೀಹರ್ಷ, ಕೋಲ್ಡ್ ಪ್ರೆಸ್ಸಡ್ ಆಯಿಲ್ ಉದ್ಯಮವನ್ನು ಆರಂಭಿಸಲೆಂದು ಸ್ನೇಹಿತರ ಬಳಿ 2 ಕೋಟಿ ಹಣ ಸಾಲ ಪಡೆದು ಜರ್ಮನಿಯಿಂದ ಯಂತ್ರ ತರಿಸಲು ಪ್ಲಾನ್ ಮಾಡಿದ್ದರು. ಹಾಗಾಗಿ 2 ಕೋಟಿ ಹಣವನ್ನ USDT ಕರೆನ್ಸಿಗೆ ಬದಲಾಯಿಸಬೇಕಾಗಿತ್ತು. ಈ ಸಂದರ್ಭದಲ್ಲಿ ಸ್ನೇಹಿತರ ಮೂಲಕ ಬೆಂಜಮಿನ್ ಹರ್ಷ ಎಂಬಾತನ ಪರಿಚಯವಾಗಿದೆ. ಬೆಂಜಮಿನ್ 2 ಕೋಟಿ ಹಣವನ್ನು ತೆಗೆದುಕೊಂಡು ವಿದ್ಯಾರಣ್ಯಪುರದ ಎಂಎಸ್ ಪಾಳ್ಯ ಸರ್ಕಲ್ ಬಳಿ ಬರುವಂತೆ ಹೇಳಿದ್ದಾರೆ.
ಶ್ರೀಹರ್ಷ, ಬೆಂಜಮಿನ್ ಮತ್ತು ಆತನ ಇಬ್ಬರು ಸ್ನೇಹಿತರು ₹2 ಕೋಟಿ ಹಣ ಎಣಿಸುವಾಗ ಏಕಾಏಕಿ ಅಂಗಡಿಗೆ ನುಗ್ಗಿದ್ದ 6-7 ಜನರು ಚಾಕುವಿನಿಂದ ಶ್ರೀಹರ್ಷ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಕುತ್ತಿಗೆ ಬಳಿ ಚಾಕು ಇಟ್ಟು ಬೆಂಜಮಿನ್ ಹರ್ಷ, ಶ್ರೀಹರ್ಷ ಮತ್ತು ಅವರ ಸ್ನೇಹಿತರನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಹಣವನ್ನು ಚೀಲಕ್ಕೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಕೊನೆಗೆ ಕಷ್ಟಪಟ್ಟು ಕೊಠಡಿ ಬಾಗಿಲು ಹಾಗೂ ಶೆಟರ್ ತೆರೆದಾಗ ಬೆಂಜಮಿನ್ ಮತ್ತು ಅವರ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಶ್ರೀಹರ್ಷ ದೂರಿದ್ದಾರೆ.
ಸದ್ಯ ಉದ್ಯಮಿ ಶ್ರೀಹರ್ಷ ನೀಡಿರುವ ದೂರಿನನ್ವಯ ಅಪರಿಚಿತ ವ್ಯಕ್ತಿಗಳು, ಬೆಂಜಮಿನ್ ಹರ್ಷ ಮತ್ತು ಅವರ ಸ್ನೇಹಿತರ ವಿರುದ್ಧ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಈಗಾಗಲೇ ಬೆಂಜಮಿನ್ ಹರ್ಷ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.