ಬಿಕ್ಲು ಶಿವ ಹತ್ಯೆ ಪ್ರಕರಣ: ಬಂಧನ ಭೀತಿಯಿಂದ ಕೋರ್ಟ್ ಮೊರೆ ಹೋದ ಶಾಸಕ ಭೈರತಿ ಬಸವರಾಜ್.
ಸ್ಥಳೀಯ ಸುದ್ದಿಕ್ರೈಮ್


ಬೆಂಗಳೂರು: ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರು, ರೌಡಿಶೀಟರ್ ಹತ್ಯೆ ಪ್ರಕರಣದಲ್ಲಿ ತಮ್ಮ ಬಂಧನದ ಭೀತಿಯಿಂದ ಪಾರಾಗಲು ಕೋರ್ಟ್ ಮೊರೆ ಹೋಗಿದ್ದಾರೆ. ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಬಂಧನ ಭೀತಿ ಎದುರಾಗಿದೆ.
ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಹಿನ್ನೆಲೆ ಬಿಜೆಪಿ ಶಾಸಕರು ಹೈಕೋರ್ಟ್ ಮೆಟ್ಟಿಲೇರಿದ್ದು, ಎಫ್ಐಆರ್ (FIR) ರದ್ದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ರೌಡಿಶೀಟರ್ ಕೊಲೆ ಪ್ರಕರಣದಲ್ಲಿ ಶಾಸಕರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಭೈರತಿ ಬಸವರಾಜ್ ಅವರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಾಹ್ನವೇ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ನ್ಯಾ.ಕೃಷ್ಣಕುಮಾರ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಬಳಿ ಕೂಡ ಭೈರತಿ ಬಸವರಾಜ್ ಮಾಹಿತಿ ಹಂಚಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ.ಏಕಾಏಕಿ ನನ್ನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಯಾರೇ ದೂರು ಕೊಟ್ಟರೂ ಎಫ್‍ಐಆರ್ ದಾಖಲಿಸಬಹುದಾ? ದಾಖಲಿಸುವುದಕ್ಕೂ ಮುನ್ನ ನನ್ನಿಂದ ಮಾಹಿತಿ ಪಡೆದಿದ್ದಾರಾ?ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ ನನಗೆ ಈ ವಿಚಾರ ಗೊತ್ತಾಯಿತು. ನನಗೆ ಸಂಬಂಧ ಇಲ್ಲದ ಪ್ರಕರಣದಲ್ಲಿ ನನ್ನ ಹೆಸರು ಬಂದಿದೆ. ಎಫ್‌ಐಆರ್‌ನಿಂದ ನನ್ನ ಹೆಸರು ತೆಗೆಯಲು ನಾನು ಕಾನೂನು ಸಮರ ಮಾಡುತ್ತೇನೆ. ಗೃಹ ಸಚಿವ ಪರಮೇಶ್ವರ್ ಅವರಿಗೂ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಪೊಲೀಸರು ವಿಚಾರಣೆಗೆ ಕರೆದರೆ ಹೋಗುತ್ತೇನೆ. ವಿಚಾರಣೆಗೆ ಹಾಜರಾಗುತ್ತೇನೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬಂತು ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಇದರ ಹಿಂದೆ ರಾಜಕೀಯ ದುರುದ್ದೇಶ ಇರಬಹುದು. ನಾನು ಕಾನೂನು ಹೋರಾಟ ಮಾಡುತ್ತೇನೆ. ಅಲ್ಲದೆ, ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪೊಲೀಸರು ವಿವಾರಣೆ ಮಾಡದೇ ಪ್ರಕರಣ ದಾಖಲಿಸಿದ್ದಾರೆ.ಇದರ ಹಿಂದೆ ಕುತಂತ್ರ ಅಡಗಿದೆ ಎಂದು ಟೀಕಿಸಿದರು.
ನಡೆದದ್ದೇನು?
ಮಂಗಳವಾರ ರಾತ್ರಿ 8.30 ಸುಮಾರಿಗೆ ಬಿಕ್ಲು ಶಿವ ತನ್ನ ಮನೆಯಿಂದ ಹೊರಗಡೆ ಬಂದು ಪುಟ್ ಪಾತ್ ಮೇಲೆ ನಿಂತಿದ್ದ. ಈ ವೇಳೆ ಮನೆ ಸಮೀಪವೇ ಸ್ಕಾರ್ಪಿಯೋ ಕಾರಿನಲ್ಲಿ ಕಾದು ಕುಳಿತಿದ್ದ 7ರಿಂದ8 ಕೊಲೆಗಡುಕರು ಬಿಕ್ಲು ಶಿವನ ಮೇಲೆ ದಾಳಿ ಮಾಡಿದರು. ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಆತನನ್ನ ಕವರ್ ಮಾಡಿ ಹಲ್ಲೆ ಮಾಡಿದ್ದಾರೆ. ಕೊನೆಗೆ ರಸ್ತೆಯಲ್ಲಿ ನಿಂತಿದ್ದ ಕಾರುಗಳ ಮಧ್ಯೆ ಸಿಲುಕಿದ ಮನಸೋ ಇಚ್ಛೆ ಮಾರಾಕಸ್ತ್ರಗಳಿಂದ ಹೊಡೆದು ನೆತ್ತರು ಹರಿಸಿದ್ದಾರೆ. ಹೀಗಾಗಿ ಬಿಕ್ಲು ಶಿವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.
ಇನ್ನು ಜಮೀನು ವಿಚಾರಕ್ಕೆ ರೌಡಿಶೀಟರ್ ಬಿಕ್ಲು ಶಿವ ಹಾಗೂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಹುಡುಗರ ನಡುವೆ ಗಲಾಟೆ ಆಗಿತ್ತು. ಕಿತ್ತಗನೂರು ಬಳಿ ಸಿಂಗಾರೆಡ್ಡಿ ಎಂಬುವವರಿಗೆ ಸೇರಿದ ಸರ್ವೆ ನಂ. 212 ಜಿಪಿಎ ಮಾಡಿಸಿಕೊಂಡಿದ್ದ ಬಿಕ್ಲು ಶಿವ, ಇದನ್ನ ರದ್ದುಪಡಿಸಬೇಕು ಮತ್ತು ಪೊಸಿಷನ್ ಬಿಟ್ಟುಕೊಡಬೇಕೆಂದು ಬೆದರಿಕೆ ಹಾಕುತ್ತಿದ್ದ ವಿಡಿಯೋವನ್ನು ರೌಡಿಶೀಟರ್ ಶಿವಪ್ರಕಾಶ್ ಕಡೆಯವರು ಮೊಬೈಲ್ನಲ್ಲಿ ಸೆರೆಹಿಡಿದಿದ್ದರು.
ಈ ಕುರಿತು ಬಿಕ್ಲು ಶಿವ ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಶಾಸಕ ಭೈರತಿ ಬಸವರಾಜ್, ಜಗದೀಶ್ ಅಲಿಯಾಸ್ ಜಗ್ಗ ಹಾಗೂ ಕಿರಣ್ ಸಹಚರರ ವಿರುದ್ಧ ದೂರು ನೀಡಿದ್ದ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿತ್ತು. ಪೊಲೀಸ್ ಆಯುಕ್ತರಿಗೆ ದೂರು ನೀಡಿ 4 ತಿಂಗಳಲ್ಲೇ ಬಿಕ್ಲು ಶಿವ ಕೊಲೆ ಆಗಿದೆ. ಅದೇ ಗ್ಯಾಂಗ್ನಿಂದ ಕೊಲೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.