ತಮಿಳಿನಿಂದ ಕನ್ನಡ ಹುಟ್ಟಿತು ಎಂಬ ಹೇಳಿಕೆ: ನಟ ಕಮಲ್ ಹಾಸನ್ ವಿರುದ್ಧ BJP-ಕನ್ನಡಪರ ಸಂಘಟನೆಗಳ ಕಿಡಿ

ರಾಜ್ಯ

Raghavendra H A

5/28/20251 min read

ತಮಿಳಿನಿಂದ ಕನ್ನಡ ಹುಟ್ಟಿತು ಎಂದು ನಟ ಕಮಲ್ ಹಾಸನ್ ಅವರು ಹೇಳಿದ್ದು, ಹೇಳಿಕೆ ಸಂಬಂಧ ರಾಜ್ಯ ಬಿಜೆಪಿ ಹಾಗೂ ಕನ್ನಡಪರ ಸಂಘಟನೆಗಳು ತೀವ್ರವಾಗಿ ಕಿಡಿಕಾರುತ್ತಿವೆ. ಅಲ್ಲದೆ, ನಟ ಕ್ಷಮೆಯಾಚಿಸಬೇಕೆಂದು ಆಗ್ರಹಿಸುತ್ತಿವೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಕಮಲ್ ಹಾಸನ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ, ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ. ಅದರಲ್ಲೂ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ ಕಮಲ್ ಹಾಸನ್ ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ ಎಂದು ಕಿಡಿಕಾರಿದ್ದಾರೆ.

ದಕ್ಷಿಣ ಭಾರತದಲ್ಲಿ ಸಾಮರಸ್ಯತೆಯನ್ನು ಬೆಸೆಯಬೇಕಾದ ಕಮಲ್ ಹಾಸನ್ ಅವರು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುತ್ತಿದ್ದರು. ಇದೀಗ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟು ಕನ್ನಡವನ್ನು ಅಪಮಾನಿಸಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಅವರು ಈ ಕೂಡಲೇ ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು.

ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿತು ಎಂಬುದನ್ನು ವ್ಯಾಖ್ಯಾನಿಸಲು ಕಮಲ್ ಹಾಸನ್ ಇತಿಹಾಸ ತಜ್ಞರೇನೂ ಅಲ್ಲ. ಆದರೆ, ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಭಾಷೆ ಭಾರತದ ಭೂಪಟದಲ್ಲಿ ಸಮೃದ್ಧತೆಯನ್ನು ಸಂಕೇತಿಸುತ್ತದೆ, ಸೌಹಾರ್ದತೆಯನ್ನು ಪ್ರತಿನಿಧಿಸುತ್ತಿದೆ. ಕನ್ನಡಿಗರು ಭಾಷಾ ದ್ವೇಷಿಗಳಲ್ಲ, ಆದರೆ ಕನ್ನಡ ನಾಡು, ನುಡಿ, ಜನ, ಜಲ, ವಿಚಾರಗಳು ಬಂದಾಗ ಸ್ವಾಭಿಮಾನವನ್ನು ಎಂದಿಗೂ ಬಲಿ ಕೊಟ್ಟಿಲ್ಲ ಎಂಬ ಸತ್ಯ ವಿವೇಕ ಸುಟ್ಟುಕೊಂಡವರಂತೆ ಮಾತನಾಡಿರುವ ಕಮಲ್ ಹಾಸನ್ ಅವರಿಗೆ ನೆನಪಿರಲಿ ಎಂದು ತಿಳಿಸಿದ್ದಾರೆ.

ಕನ್ನಡಪರ ಹೋರಾಟಗಾರ ಪ್ರವೀಣ್ ಶೆಟ್ಟಿ ಅವರು ಮಾತನಾಡಿ, ಸಂಘಟನೆಯ ಸದಸ್ಯರು ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಕ್ಷಮೆಯಾಚನೆಗೆ ಆಗ್ರಹಿಸಬೇಕಿತ್ತು. ಆದರೆ, ನಟನನ್ನು ಭೇಟಿಯಾಗುವ ಮೊದಲೇ ಅವರು ಸ್ಥಳದಿಂದ ನಿರ್ಗಮಿಸಿದ್ದರು ಎಂದು ಹೇಳಿದ್ದಾರೆ.

ನೀವು ಕರ್ನಾಟಕದಲ್ಲಿ ವ್ಯವಹಾರ ಮಾಡಲು ಮತ್ತು ನಿಮ್ಮ ಸಿನಿಮಾಗಳನ್ನು ಪ್ರದರ್ಶಿಸಲು ಬಯಸುತ್ತಿರುವುದೇ ಆದರೆ, ಕನ್ನಡ ಮತ್ತು ಕನ್ನಡಿಗರನ್ನು ಅವಮಾನಿಸುವುದನ್ನು ನಿಲ್ಲಿಸಿ. ನಿಮ್ಮ ಸಿನಿಮಾ ಪ್ರಚಾರ ಮಾಡಲು ಇಲ್ಲಿಗೆ ಬಂದಿದ್ದಿರಿ. ವಿವಾದಾದ್ಮಕ ಹೇಳಿಕೆ ಬಳಿಕ ಕರ್ನಾಟಕ ರಕ್ಷಣಾ ವೇದಿಕೆ ಅವರ ಮುಖಕ್ಕೆ ಕಪ್ಪು ಮಸಿ ಬಳಿಯಲು ಸ್ಥಳಕ್ಕೆ ತೆರಳಿತ್ತು. ಆದರೆ, ಅಷ್ಟರಲ್ಲಾಗಲೇ ಅವರು ಸ್ಥಳದಿಂದ ನಿರ್ಗಮಿಸಿದ್ದರು ಎಂದು ತಿಳಿಸಿದ್ದಾರೆ.