ಡಿಸೆಂಬರ್ 25 ಕ್ಕೆ ಬ್ರಹ್ಮರಥೋತ್ಸವ..ಡಿ.10 ರಿಂದ 18 ವರೆಗೆ ರಾಸುಗಳ ಜಾತ್ರೆ
ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ


ಶ್ರೀ ಘಾಟಿ ಸುಬ್ರಮಣ್ಯರವರ ಬ್ರಹ್ಮರಥೋತ್ಸವ ಡಿಸೆಂಬರ್ 25 ರಂದು ನಡೆಯಲಿದೆ. ಈ ಬಾರಿ ವಿಶೇಷವಾಗಿ ಪುಷ್ಪಲಂಕಾರ ದೀಪ ಅಲಂಕಾರಗಳಿರುತ್ತದೆ. ಭಕ್ತಾದಿಗಳ ಅನುಕೂಲಕ್ಕೆ ಕುಡಿಯುವ ನೀರಿನ ವ್ಯವಸ್ಥೆ, ಕ್ಯೂಲೈನ್ ವ್ಯವಸ್ಥೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಲಾಗುವುದು.
ಸುಂಕ ರಹಿತ ಜಾತ್ರೆ
ಈ ಬಾರಿಯ ಘಾಟಿ ಜಾತ್ರೆಯಲ್ಲಿ ಜಾನುವಾರುಗಳಿಗೆ ಹಾಗೂ ಬರುವಂತಹ ಭಕ್ತಾದಿಗಳ ವಾಹನಗಳಿಗೆ ಸುಂಕ ಇರುವುದಿಲ್ಲ. ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ, ಗರ್ಭಿಣಿ ಬಾಣಂತಿಯರಿಗೆ ನೇರವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಡಿ.10 ರಿಂದ 18 ವರೆಗೆ ರಾಸುಗಳ ಜಾತ್ರೆ
ಡಿಸೆಂಬರ್ 10 ರಿಂದ 18 ರವರೆಗೆ ರಾಸುಗಳ ಜಾತ್ರೆ ನಡೆಯಲಿದೆ ರಾಸುಗಳ ಜಾತ್ರೆ ಸಮಯದಲ್ಲಿ ವಿಶೇಷ ದೀಪಾಲಂಕಾರ, ರೈತರಿಗೆ ಮತ್ತು ರಾಸುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ರಾಸುಗಳಿಗೆ ರೋಗಗಳು ಹರಡದಂತೆ ಪಶು ವೈದ್ಯರ ವ್ಯವಸ್ಥೆ ಕಲ್ಪಿಸಲಾಗುವುದು. ರಾಸುಗಳ ಜಾತ್ರೆಗೆ ಆಗಮಿಸುವ ರೈತರಿಗೆ ತಿಂಡಿ ಮತ್ತು ಊಟದ ವ್ಯವಸ್ಥೆಯನ್ನು ದೇವಾಲಯದ ವತಿಯಿಂದ ಕಲ್ಪಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಮಾತನಾಡಿ ಘಾಟಿ ಕ್ಷೇತ್ರ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲಾಗಿದೆ. ಕ್ಷೇತ್ರ ಅಭಿವೃದ್ಧಿಗೆ 100 ಎಕರೆ ಜಾಗದ ಅವಶ್ಯಕತೆ ಇದೆ. ಸದ್ಯಕ್ಕೆ 50 ಎಕರೆ ಜಾಗ ಬೇಕಾಗಿದ್ದು 20 ಎಕರೆ ಸರ್ಕಾರಿ ಜಮೀನು ಇದ್ದು, ಇನ್ನು 30 ಎಕರೆ ಜಾಗ ಹುಡುಕಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಘಾಟಿ ಕ್ಷೇತ್ರದಲ್ಲಿ ಸುಸಜ್ಜಿತ ಅನ್ನಸಂತರ್ಪಣೆ ಕಟ್ಟಡ, ಮಾಕಳಿಯಿಂದ ಕಂಟನಕುಂಟೆ ಮಾರ್ಗವಾಗಿ ಘಾಟಿಯ ವರೆಗೆ ರಸ್ತೆ ಅಭಿವೃದ್ಧಿ, ಅತಿಥಿ ಗೃಹ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಭಕ್ತಾದಿಗಳ ಹಿತ ದೃಷ್ಟಿಯಿಂದ ಸುಂಕ ರಹಿತ ಜಾತ್ರೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಮುಜರಾಯಿ ಇಲಾಖೆ ಆಯುಕ್ತರಾದ ಶರತ್, ಜಿಲ್ಲಾಧಿಕಾರಿ ಎಬಿ ಬಸವರಾಜು, ಎಡಿಸಿ ಸೈಯಿದಾ ಆಯಿಷಾ, ಘಾಟಿ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ದಿನೇಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷರಾದ ಜಗನ್ನಾಥ, ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಸಮಿತಿ ಸದಸ್ಯರು, ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳು ಉಪಸ್ಥಿತರಿದ್ದರು.