Branded Dress: ವಿದೇಶಿ ಬ್ರ್ಯಾಂಡ್​ ಲೇಬಲ್​ ಬಳಸಿ ನಕಲಿ ಬಟ್ಟೆ ತಯಾರಿ, ಮೂವರ ಬಂಧನ

ಕ್ರೈಮ್

ರಾಘವೇಂದ್ರ ಹೆಚ್.ಎ

4/17/20251 min read

ನೆಲಮಂಗಲ: ವಿದೇಶಿ ಬ್ರ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ಅಂಟಿಸಿ ಬಟ್ಟೆ ತಯಾರಿಸುತ್ತಿದ್ದ ಗಾರ್ಮೆಂಟ್ ಸಂಸ್ಥೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಾದನಾಯಕನ ಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯ ತೋಟದಗುಡ್ಡದಹಳ್ಳಿಯಲ್ಲಿರುವ ಸಂಗಮ್ ಅಪೆರಲ್ಸ್ ಎಂಬ ಗಾರ್ಮೆಂಟ್‌ ಮೇಲೆ ದಾಳಿ ನಡೆದಿದೆ. ಆಶ್ರಫ್, ಶರ್ಪ್ ಉದ್ದೀನ್ ಮತ್ತು ಸರವಣ ಎಂಬ ಮೂವರು ಬಂಧಿತ ಆರೋಪಿಗಳು.

ಇವರು ಬರ್ಬೆರಿ ಮತ್ತು ಪೋಲೋ ರಾಲ್ಫ್ ಲಾರೆನ್ ಎಂಬ ಪ್ರಸಿದ್ಧ ಬ್ರ್ಯಾಂಡ್‌ಗಳ ನಕಲಿ ಲೇಬಲ್‌ಗಳನ್ನು ಹಾಕಿ ಬಟ್ಟೆಗಳನ್ನು ತಯಾರಿಸುತ್ತಿದ್ದರು. ದಾಳಿಯಲ್ಲಿ ಸುಮಾರು 24 ಸಾವಿರ ನಕಲಿ ಲೇಬಲ್ ಹಾಕಿದ ಬಟ್ಟೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬ್ರ್ಯಾಂಡ್ ಕಂಪನಿಗಳ ಪರವಾಗಿ ಲೈಸೆನ್ಸ್​ ಪಡೆದುಕೊಂಡಿದ್ದ ಶ್ರೀನಿವಾಸ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಕಾಪಿರೈಟ್ ಕಾಯ್ದೆ 2023ರ ಸೆಕ್ಷನ್ 318(4), 51(ಎ), 51(ಬಿ), ಮತ್ತು 65 ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.