ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸ್ತನ್ಯಪಾನ ಅವಶ್ಯಕ: ಆರೋಗ್ಯ ಅಧಿಕಾರಿ ಡಾ. ಸವಿತಾ
ಸ್ಥಳೀಯ ಸುದ್ದಿ


ಕೆಆರ್ ಪುರ: ಸ್ತನ್ಯಪಾನವು ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ, ಸಮತೋಲಿತ, ಸಂಪೂರ್ಣ ಆಹಾರವಾಗಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನ್ಯಪಾನ ಅತ್ಯಗತ್ಯ ಎಂದು ಮಹದೇವಪುರ ವಲಯ ಆರೋಗ್ಯ ಅಧಿಕಾರಿ ಡಾ. ಸವಿತಾ ಅವರು ತಿಳಿಸಿದರು.
ಬಿಬಿಎಂಪಿ ಮಹದೇವಪುರ ವಲಯ ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಭಟ್ಟರಹಳ್ಳಿ ಗ್ರಾಮದ ನಮ್ಮ ಕ್ಲಿನಿಕ್ ನಲ್ಲಿ 2025 ರ ವಿಶ್ವ ಸ್ತನ್ಯಪಾನ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿಯ ಸೌಂದರ್ಯ ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂದು ತಿಳಿಸಿದರು.
ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಇಬ್ಬರ ಆರೋಗ್ಯದ ದೃಷ್ಟಿಯಿಂದಲೂ ಬಹುಮುಖ್ಯ. ಸ್ತನ್ಯಪಾನದಿಂದ ಪ್ರತೀ ವರ್ಷ ವಿಶ್ವದಾದ್ಯಂತ ಸುಮಾರು 8 ಲಕ್ಷ ಮಕ್ಕಳ ಜೀವ ಉಳಿಸಲು ಸಾಧ್ಯತೆ ಇದೆ ಎಂದವರು ಅಭಿಪ್ರಾಯ ಪಟ್ಟರು
ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿಯಲ್ಲಿನ ಕೊಬ್ಬಿನ ಅಂಶ ಕರಗಲಿದ್ದು,ದೇಹಿಕವಾಗಿ ಉಂಟಾಗುವ ನಾನಾ ಸಮಸ್ಯೆಗಳಿಗೆ ಸ್ತನ್ಯಪಾನ ಪರಿಹಾರವಾಗಿದೆ ಎಂದು ಹೇಳಿದರು.
ಕೃಷ್ಣರಾಜಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ನಿಸರ್ಗ ಅವರು ಮಾತನಾಡಿ, ಸ್ತನಪಾನ ಮಹತ್ವದ ಕುರಿತ ಕರಪತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ನಮ್ಮ ಕ್ಲಿನಿಕ್ ನಲ್ಲಿ ದೊರೆಯುವ ಸೇವೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ತಾಯಿಯ ಎದೆ ಹಾಲಿನಲ್ಲಿರುವ ಪ್ರೊಟೀನ್ ಮಗುವಿನ ಮೆದುಳಿನ ಬೆಳವಣಿಗೆಗೆ ಅತೀ ಅವಶ್ಯಕ. ಸ್ತನ್ಯಪಾನವು ಮಕ್ಕಳ ಬುದ್ಧಿಮಟ್ಟವನ್ನು ಚುರುಕುಗೊಳಿಸು ವುದಲ್ಲದೇ ಮುಂಬರುವ ದೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಾಯಿ- ಮಗುವಿನ ಭಾಂದವ್ಯ ಇದರಿಂದ ವೃದ್ಧಿಯಾಗುತ್ತದೆ. ಜೊತೆಗೆ ತಾಯಿಗೆ ಸ್ತನ ಕ್ಯಾನ್ಸರಿನಿಂದ ರಕ್ಷಣೆ ಸಿಗುತ್ತದೆ ಎಂದರು.
ಈ ಸಂದರ್ಭದಲ್ಲಿ ಕೃಷ್ಣರಾಜಪುರ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಲೆವೀನಾ ಪಿಂಟು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಗುರುರಾಜ್ ಮತ್ತು ಶ್ರೀಶೈಲ ಕನ್ನಾಳ್ ಇದ್ದರು