Cast Census: ಜಾತಿ ಗಣತಿ ವರದಿ ಬಹಿರಂಗ: ಪರಿಶಿಷ್ಟ ಜಾತಿ ನಂ.1, ಸಂಪೂರ್ಣ ವಿವರ ಇಲ್ಲಿದೆ
ರಾಜ್ಯ


ಬೆಂಗಳೂರು: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವರದಿ (ಜಾತಿ ಗಣತಿ) ಬಹಿರಂಗವಾಗಿದ್ದು, ವರದಿ ಪ್ರಕಾರ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾತಿ ಎಂದರೆ ಅದು ಪರಿಶಿಷ್ಟ ಜಾತಿ ಎಂಬುದಾಗಿ ತಿಳಿದುಬಂದಿದೆ.
ಹಲವು ಚರ್ಚೆ, ವಿರೋಧದ ನಡುವೆಯೂ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015 ಮಂಡನೆ ಆಗಿದೆ. ಸಮಗ್ರ ಚರ್ಚೆಗೆ ಮುಂದಿನ ಗುರುವಾರದ ಸಚಿವ ಸಂಪುಟ ಸಭೆಯ ಮುಹೂರ್ತ ನಿಗದಿ ಮಾಡಲಾಗಿದೆ.
ಈ ಮಧ್ಯೆ ಜಾತಿ ಗಣತಿ ವರದಿಯ ಅಂಕಿ-ಅಂಶ ಬಹಿರಂಗವಾಗಿದೆ. ಈ ಸಮೀಕ್ಷೆಗೆ ಒಟ್ಟು 5 ಕೋಟಿ 98 ಲಕ್ಷ 14 ಸಾವಿರದ 942 ಜನರು ಒಳಪಟ್ಟಿದ್ದಾರೆ.
ಸಮೀಕ್ಷೆಯ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮೊದಲ ಸ್ಥಾನದಲ್ಲಿದೆ. ಎರಡನೆಯ ಸ್ಥಾನದಲ್ಲಿ ಲಿಂಗಾಯತರು, ಮೂರನೇ ಸ್ಥಾನದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಹಾಗೂ ನಾಲ್ಕನೆಯ ಸ್ಥಾನದಲ್ಲಿ ಮುಸ್ಲಿಮರು, ಐದನೆಯ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆಂದು ತಿಳಿದಬಂದಿದೆ.
ಆ ಪ್ರಕಾರ ಪರಿಶಿಷ್ಟ ಜಾತಿಯ ಜನಸಂಖ್ಯೆ 1,09,29,347 ಆಗಿದ್ದು, ಪ್ರವರ್ಗ 3ಬಿ ಯಲ್ಲಿ ಬರುವ ವೀರಶೈವ ಲಿಂಗಾಯತರು 81, 37,536 ಜನಸಂಖ್ಯೆ ಇದೆ. ಪ್ರವರ್ಗ 2ಎ ನಲ್ಲಿ ಬರುವ ಇತರೆ ಹಿಂದುಳಿದ ವರ್ಗಗಳ ಜನಸಂಖ್ಯೆ 77,78,209 ರಷ್ಟಿದೆ. ನಾಲ್ಕನೇ ಸ್ಥಾನದಲ್ಲಿ ಪ್ರವರ್ಗ 2ಬಿ ಯಲ್ಲಿ ಬರುವ ಮುಸ್ಲಿಂ ಜನಸಂಖ್ಯೆ 75, 25, 880 ಇದೆ. ಪ್ರವರ್ಗ 3ಎ ನಲ್ಲಿ ಬರುವ ಒಕ್ಕಲಿಗರು 72,99,577 ರಷ್ಟಿದ್ದಾರೆ. ಪರಿಶಿಷ್ಟ ಪಂಗಡ 42, 81,289 ಜನಸಂಖ್ಯೆ ಹೊಂದಿದೆ.
ವರದಿಯಲ್ಲಿ ಪ್ರವರ್ಗ 1 ರಲ್ಲಿ ಬರುವ ಉಪ್ಪಾರ, ಗೊಲ್ಲ, ಗಂಗಮತಸ್ಥ ಸೇರಿ 99 ಜಾತಿಗಳನ್ನು ಪ್ರವರ್ಗ 1ಎ ಹಾಗೂ 1ಬಿ ಅಡಿ ವರ್ಗೀಕರಿಸಲಾಗಿದೆ. ಆ ಪ್ರಕಾರ ಪ್ರವರ್ಗ 1ಎ ಅಡಿ 34,69, 638 ಇದ್ದರೆ, ಪ್ರವರ್ಗ 1ಬಿ ಅಡಿ 73,92,313 ಜನಸಂಖ್ಯೆ ಇದೆ. ಪ್ರವರ್ಗ 1ಎ ಹಾಗೂ 1ಬಿ ಸೇರಿಸಿದರೆ 1,08, 88,951 ಜನಸಂಖ್ಯೆ ಹೊಂದಿದ್ದು, ಶೇ 13ರಷ್ಟು ಜನಸಂಖ್ಯೆ ಇದೆ. ಪ್ರವರ್ಗ ೨ಎ ಹಾಗೂ ೨ಬಿ ಸೇರಿ 1,53,04,089 ಜನಸಂಖ್ಯೆ ಇದೆ. ಪ್ರವರ್ಗ 3ಎ ಹಾಗೂ 3ಬಿ ಸೇರಿ ಒಟ್ಟು 1,54,37,113 ಜನಸಂಖ್ಯೆ ಹೊಂದಿವೆ.
ಆಯೋಗದ ಶಿಪಾರಸುಗಳು ಇಂತಿದೆ.
ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗವು, ಸಮುದಾಯಗಳಲ್ಲಿನ ಹಿಂದುಳಿದಿರುವಿಕೆಯನ್ನು ಪರಿಗಣಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಪುನರ್ರಚಿಸಲು ಶಿಫಾರಸು ಮಾಡಿದೆ.
· ಮುಸ್ಲಿಂ ಸಮುದಾಯದ ಜನಸಂಖ್ಯೆ ಒಂದು ಜಾತಿಯಾಗಿ 75.27 ಲಕ್ಷ ಇದ್ದು, ಪರಿಶಿಷ್ಟ ಜಾತಿ ಹೊರತುಪಡಿಸಿದರೆ ಅತಿ ಹೆಚ್ಚು ಜನರಿರುವ ಏಕ ಜಾತಿಯಾಗಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲಿದ್ದಾರೆ. ಹಾಗಾಗಿ, ಮೀಸಲು ಪ್ರಮಾಣವನ್ನು ಶೇ.8ಕ್ಕೆ ಹೆಚ್ಚಿಸಬೇಕು.
· ಪ್ರಬಲ ಜಾತಿಗಳಲ್ಲಿ ಒಂದಾದ ಒಕ್ಕಲಿಗರು 61.50 ಲಕ್ಷ ಇದ್ದು, ಉಪಜಾತಿಗಳನ್ನು ಸೇರಿಸಿದರೆ ಜನಸಂಖ್ಯೆ 72 ಲಕ್ಷದಷ್ಟಾಗಿದೆ. ಹಾಗಾಗಿ, ಪ್ರವರ್ಗ 3(ಎ) ಪಟ್ಟಿಯಲ್ಲಿನ ಮೀಸಲು ಪ್ರಮಾಣವನ್ನು ಸದ್ಯದ ಶೇ.4ರಿಂದ ಶೇ.7ಕ್ಕೆ ಹೆಚ್ಚಿಸಬಹುದು.
· ಪ್ರವರ್ಗ 3 (ಬಿ) ಪಟ್ಟಿಯಲ್ಲಿನ ಲಿಂಗಾಯತರ ಜನಸಂಖ್ಯೆ 66 ಲಕ್ಷ ಇದ್ದು, ಉಪಜಾತಿಗಳು ಸೇರಿದಂತೆ ಜನಸಂಖ್ಯೆ 81 ಲಕ್ಷ ಆಗುತ್ತದೆ. ಹಾಗಾಗಿ, ಜನಸಂಖ್ಯೆಗೆ ಅನುಗುಣವಾಗಿ ಈ ವರ್ಗದ ಮೀಸಲನ್ನು ಸದ್ಯದ ಶೇ.5 ರಿಂದ ಶೇ.8ಕ್ಕೆ ಹೆಚ್ಚಳ ಮಾಡಬೇಕು.
· ವೃತ್ತಿ ಮತ್ತು ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಪ್ರವರ್ಗ -1ರಲ್ಲಿಸೇರಿರುವ ಜಾತಿಗಳಿಗೆ ಮೀಸಲನ್ನು ಶೇ.4ರಿಂದ ಶೇ.6ಕ್ಕೆ ಹೆಚ್ಚಿಸಬೇಕು. ಪ್ರವರ್ಗ 2(ಎ) ಜಾತಿಗಳನ್ನು ಮರು ವರ್ಗೀಕರಣ ಮಾಡಬೇಕು ಮತ್ತು ಸದ್ಯದ ಶೇ.15ರಿಂದ ಶೇ.22ಕ್ಕೆ ಹೆಚ್ಚಿಸಬೇಕು.