ಸಿನಿಮಾ ಸ್ಟೈಲ್ ದರೋಡೆ: ಗನ್ ತೋರಿಸಿ 5 ಕೋಟಿ ಮೌಲ್ಯದ ಚಿನ್ನಾಭರಣ ಲೂಟಿ

ಕ್ರೈಮ್ಜಿಲ್ಲಾ ಸುದ್ದಿ

ಧರ್ಮ ಬಸವನಪುರ.

12/28/20251 min read

ಮೈಸೂರು: ಹುಣಸೂರು ಪಟ್ಟಣದಲ್ಲಿ ಭಾನುವಾರ (ಡಿ. 28) ಸಿನಿಮಾ ಶೈಲಿಯ ದರೋಡೆ ಪ್ರಕರಣವೊಂದು ನಡೆದಿದ್ದು, ಮುಸುಕುಧಾರಿ ದರೋಡೆಕೋರರು ಗನ್ ತೋರಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದಲ್ಲಿರುವ 'ಸ್ಕೈ ಗೋಲ್ಡ್ಸ್ ಆಂಡ್ ಡೈಮಂಡ್ಸ್ ಮಳಿಗೆಯಲ್ಲಿ ಈ ಘಟನೆ ಸಂಭವಿಸಿದೆ.

ಹುಣಸೂರು ಬಸ್ ನಿಲ್ದಾಣದ ಹಿಂದಿರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಶಾಪ್ಗೆ ಮಧ್ಯಾಹ್ನ ಸುಮಾರು 2.10 ರ ಸಮಯದಲ್ಲಿ ಬೈಕ್‌ನಲ್ಲಿ ಬಂದ ಐವರು ಮುಸುಕುಧಾರಿಗಳು 7-8ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದ ವೇಳೆ ನುಗ್ಗಿ ದರೋಡೆ ಮಾಡಿದ್ದಾರೆ. 5 ಮಂದಿಯಲ್ಲಿ ನಾಲ್ವರು ಮುಸುಕು ಧರಿಸಿದ್ದರು.

ಓರ್ವ ಗ್ಯಾಂಗ್ ಲೀಡರ್ ಎರಡು ಕೈಗಳಲ್ಲೂ ಗನ್ ಹಿಡಿದು ಸಿನಿಮೀಯ ಶೈಲಿಯಲ್ಲಿ ಬೆದರಿಕೆ ಹಾಕಿ, ಕೆಲವೇ ನಿಮಿಷದಲ್ಲಿ ಅಂಗಡಿಯಲ್ಲಿದ್ದ ಅಂದಾಜು 5 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿರುವ ಮಾಹಿತಿ ಬಂದಿದೆ. ದರೋಡೆಕೋರರನ್ನು ಸಿಬ್ಬಂದಿ ಹಿಂಬಾಲಿಸಿದ್ದಾರೆ. ಆದರೆ ಹಿಡಿಯಲು ಸಾಧ್ಯವಾಗಿಲ್ಲ. ದರೋಡೆ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪರಾರಿಯಾಗುವ ವೇಳೆ ಓರ್ವ ದರೋಡೆಕೋರ ಹೆಲ್ಮೆಟ್ ಬಿಟ್ಟು ಹೋಗಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

ಎರಡು ಬೈಕ್ ಗಳಲ್ಲಿ ಬಂದ ಗುಂಪು ಕೃತ್ಯ ಎಸಗಿದೆ. ದರೋಡೆಕೋರರನ್ನು ಸಿಬ್ಬಂದಿಗಳು ಹಿಂಬಾಲಿಸಿದ್ದಾರೆ. ಆದರೆ ದುಷ್ಕರ್ಮಿಗಳನ್ನ ಹಿಡಿಯಲು ಸಾಧ್ಯವಾಗಿಲ್ಲ. ದರೋಡೆ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು 5 ಕೆ.ಜಿ. ಚಿನ್ನಾಭರಣ ದೋಚಿರುವುದಾಗಿ ತಿಳಿದು ಬಂದಿದೆ.

ಈ ಕುರಿತು ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಅವರು ಮಾತನಾಡಿ, "ಎರಡು ಬೈಕ್‌ಗಳಲ್ಲಿ ಐದು ಮಂದಿ ಬಂದು ಗನ್ ತೋರಿಸಿದ್ದಾರೆ ಎಂದು ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. 7-8 ಮಂದಿ ಸಿಬ್ಬಂದಿ ಇದ್ದರು. ಕೆಲವರು ಊಟಕ್ಕೆ ಹೋಗಿದ್ದರು. 8 ರಿಂದ 9 ನಿಮಿಷ ಸಮಯ ಕಳೆದಿದ್ದಾರೆ. ಸರಿಯಾಗಿ ಎಷ್ಟು ಚಿನ್ನಾಭರಣ ಕದ್ದಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ತನಿಖೆ ಮಾಡಲಾಗುತ್ತಿದೆ. ಯಾವ ಸಿಬ್ಬಂದಿಗೆ ಹೆದರಿಸಿ ಚಿನ್ನಾಭರಣ ತುಂಬಿಕೊಂಡಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ನಾಲ್ಕು ಜನ ಪಾಲುದಾರರು ಎಪ್ರಿಲ್‌ನಲ್ಲಿ ಈ ಮಳಿಗೆ ತೆರೆದಿದ್ದಾರೆ. ಎಲ್ಲಾ ಆಯಾಮಗಳಲ್ಲಿ ತನಿಖೆ ಮಾಡಲಾಗುವುದು ಎಂದರು.

ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ''ಹುಣಸೂರು ಚಿನ್ನದಂಗಡಿಯಲ್ಲಿ ಮಧ್ಯಾಹ್ನ 2ರಿಂದ 2.30ರ ಸುಮಾರಿಗೆ 5 ಜನರ ತಂಡವು ಸಿಬ್ಬಂದಿಗೆ ಗನ್ ತೋರಿಸಿ ದರೋಡೆ ಮಾಡಿದೆ. ಎಷ್ಟು ಮೌಲ್ಯದ ವಜ್ರ, ಚಿನ್ನಾಭರಣ ದರೋಡೆ ಆಗಿದೆ ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ. ಅಂಗಡಿಯವರ ಚಿನ್ನದ ದಾಸ್ತಾನು ಹಾಗೂ ಮಿಸ್ಸಿಂಗ್ ಲೆಕ್ಕಾಚಾರದ ನಂತರ ಮೌಲ್ಯ ಗೊತ್ತಾಗಲಿದೆ. ಆರೋಪಿಗಳ ಸೆರೆಗೆ ಐವರು ಇನ್ಸ್‌ಪೆಕ್ಟರ್ಗಳ ನೇತೃತ್ವದಲ್ಲಿ 5 ತಂಡ ರಚನೆ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿನ 18 ಚೆಕ್‌ಪೋಸ್ಟ್ಗಳು ಸೇರಿದಂತೆ ಎಲ್ಲ ಕಡೆಗಳಲ್ಲೂ ಪೊಲೀಸರು ಅಲರ್ಟ್ ಆಗಿದ್ದಾರೆ. ಅಂಗಡಿಯ ಮ್ಯಾನೇಜರ್ ಹಾಗೂ ಸಿಬ್ಬಂದಿಯ ಕೈವಾಡದ ಬಗ್ಗೆಯೂ ತನಿಖೆ ನಡೆಯಲಿದೆ. ನಾನಾ ಆಯಾಮಗಳಲ್ಲಿ ತನಿಖೆ ಕೈಗೊಳ್ಳುತ್ತೇವೆ'' ಎಂದು ತಿಳಿಸಿದರು.