ಮಹದೇವಪುರ ಕ್ಷೇತ್ರದಲ್ಲಿ ಕಾಮಗಾರಿ ಪರಿಶೀಲನೆ ನಡೆಸಿದ ಸಿಎಂ.
ಸ್ಥಳೀಯ ಸುದ್ದಿ


ಮಹದೇವಪುರ: ಕ್ಷೇತ್ರದ ವಿಬ್ ಗಯಾರ್ ರಸ್ತೆ, ಟಿ- ಜಂಕ್ಷನ್ ಮತ್ತು ಪಣತ್ತೂರು ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿ ಪರಿಶೀಲನೆ ನಡೆಸಿದರು. ಮುಖ್ಯಮಂತ್ರಿಗಳ ಜೊತೆಗೆ ಪರಿಶೀಲನೆ ವೇಳೆ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಕ್ಷೇತ್ರದ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದರು.
ನಮ್ಮ ಕ್ಷೇತ್ರದಲ್ಲಿ ಅನೇಕ ಐಟಿಬಿಟಿ ಕಂಪನಿಗಳಿದ್ದು, ಕ್ಷೇತ್ರದಲ್ಲಿನ ಮೇಜರ್ ರಸ್ತೆಗಳು ಇವುಗಳಿಗೆ ಸಂಪರ್ಕಿಸುವ ವಾರ್ಡ್ ರಸ್ತೆಗಳು ಹಾಗೂ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಆದುದರಿಂದ ಹಾನಿಯಾಗಿರುವ ರಸ್ತೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸದರಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜೊತೆಗೆ ಈ ಕಾಮಗಾರಿಗಳಿಗೆ ಬೇಕಾಗಿರುವ ಅಗತ್ಯ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು ಎಂದು ಮನವಿ ಪತ್ರ ನೀಡಿ ವಿನಂತಿಸಲಾಯಿತು.
ಮುಖ್ಯಮಂತ್ರಿಗಳು ಮನವಿಯನ್ನು ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿ, ತ್ವರಿತವಾಗಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರ ಮಂಡಲದ ಅಧ್ಯಕ್ಷ ಎನ್ ಆರ್ ಶ್ರೀಧರ್ ರೆಡ್ಡಿ, ಮಾಜಿ ಅಧ್ಯಕ್ಷ ಮನೋಹರರೆಡ್ಡಿ, ಮುಖಂಡರಾದ ವಿ.ಪಿ.ರಕ್ಷೀತ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಸುರಿಯುವವರ ವಿರುದ್ಧ ಕಠಿಣ ಕ್ರಮ:
ಬೆಂಗಳೂರು ನಗರ ಪ್ರದಕ್ಷಿಣೆಯ ಅಂಗವಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಪಣತ್ತೂರು ಟಿ.ಕ್ರಾಸ್‌ಗೆ ಭೇಟಿನೀಡಿ, ರಸ್ತೆ, ಒಳಚರಂಡಿ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಈ ವೇಳೆ ಪಣತ್ತೂರಿನ ರಸ್ತೆಯುದ್ದಕ್ಕೂ ಕಟ್ಟಡ ನಿರ್ಮಾಣದ ತ್ಯಾಜ್ಯವನ್ನು ಸುರಿದಿರುವುದರಿಂದ ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಸ್ಥಳದಲ್ಲಿ ಸಿ.ಸಿ ಟಿವಿ ಅಳವಡಿಕೆ ಮಾಡಿ ಕಸ ಸುರಿಯುವುದಕ್ಕೆ ಕಡಿವಾಣ ಹಾಕುವಂತೆ ಮತ್ತು ಬಿಬಿಎಂಪಿ ಮಾರ್ಷಲ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಿ ತ್ಯಾಜ್ಯ ಸುರಿಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳದಲ್ಲಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಲಾಯಿತು.