ಕರಾವಳಿ ಭಾಗದಲ್ಲಿ ಸರಣಿ ಕೊಲೆ : ಮಂಗಳೂರು ನಗರ ಪೊಲೀಸ್ ಕಮಿಷನರ್, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ವರ್ಗಾವಣೆ
ಜಿಲ್ಲಾ ಸುದ್ದಿರಾಜ್ಯ


ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸರಣಿ ಸೇಡಿನ ಹತ್ಯೆ, ಕೋಮು ಹಿಂಸಾಚಾರದ ವಿರುದ್ಧ ಜನರಿಂದ ಆಕ್ರೋಶ ವ್ಯಕ್ತವಾಗಿದ್ದು, ಇದರ ಬೆನ್ನಲ್ಲೇ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.
ಮಂಗಳೂರು ಆಯುಕ್ತರಾಗಿ ಗುಪ್ತದಳದ ಡಿಐಜಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಿಸಿದ ಸರ್ಕಾರ, ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಮಂಗಳೂರು ಆಯುಕ್ತರಾಗಿದ್ದ ಅನುಪಮ್ ಅಗರ್‌ವಾಲ್ ಅವರನ್ನು ನಿಯೋಜಿಸಿದೆ..
ಅದೇ ರೀತಿ ಉಡುಪಿ ಜಿಲ್ಲೆ ಎಸ್ಪಿ ಕೆ.ಅರುಣ್ ಅವರಿಗೆ ದಕ್ಷಿಣ ಕನ್ನಡ ಹಾಗೂ ಗುಪ್ತದಳದ ಎಸ್ಪಿ ಹರಿರಾಮ್ ಶಂಕರ್ ಅವರಿಗೆ ಉಡುಪಿ ಎಸ್ಪಿ ಹುದ್ದೆ ನೀಡಲಾಗಿದೆ. ಆದರೆ ದಕ್ಷಿಣ ಕನ್ನಡ ಎಸ್ಪಿಯಾಗಿದ್ದ ಯತೀಶ್ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.
ಈ ಹಿಂದೆ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿಯಾಗಿ ಕೆಲಸ ಮಾಡಿ ಅನುಭವವಿದೆ. ಅಲ್ಲದೆ, ಕೋಮು ಗಲಭೆಗಳ ನಿಯಂತ್ರಣಕ್ಕೆ 'ಟಾಸ್ಕ್ ಮಾಸ್ಟರ್' ಎಂದೇ ಇಲಾಖೆಯಲ್ಲಿ ಅವರು ಹೆಸರು ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿಯಾಗಿದ್ದಾಗ ಕೋಮು ದ್ವೇಷವನ್ನು ತಹಬದಿಗೆ ತಂದು ರೆಡ್ಡಿ ಅವರು ಹಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಹಾಗೆ ಇತ್ತೀಚೆಗೆ ಆರು ನಕ್ಸಲೀಯರ ಶರಣಾಗತಿಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಹಾಗೂ ಎಸ್ಪಿ ಹರಿರಾಮ್ ಶಂಕರ್ ಮಹತ್ವದ ಪಾತ್ರವಹಿಸಿದ್ದರು. ಈ ದಕ್ಷತೆಗೆ ಕಾರಣಕ್ಕೆ ಪ್ರಸುತ್ತ ಕರಾವಳಿ ಪ್ರದೇಶದಲ್ಲಿ ಕೋಮು ದ್ವೇಷದ ಸರಣಿ ಕೊಲೆಗಳಿಂದ ಉಂಟಾಗಿರುವ ಪ್ರಕ್ಷುಬ್ಧ ಪರಿಸ್ಥಿತಿ ತಿಳಿಗೊಳಿಸಲು ರೆಡ್ಡಿ ಮೇಲೆ ಸರ್ಕಾರ ವಿಶ್ವಾಸವಿರಿಸಿದೆ.
ಜಿಲ್ಲೆಯ ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಮೇ 31 ರಂದು ಜಿಲ್ಲೆಗೆ ಗೃಹ ಸಚಿವ ಡಾ|ಜಿ.ಪರಮೇಶ್ವರ ಹಾಗೂ ತಾವು ಭೇಟಿ ನೀಡುವುದಾಗಿ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಜಿಲ್ಲೆಯ ಘಟನೆ ಕುರಿತು ಸಿಎಂ ಹಾಗೂ ಗೃಹಸಚಿವರೊಂದಿಗೆ ಚರ್ಚಿಸಲಾಗಿದೆ. ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ನಾನಾಗಲೀ, ನಮ್ಮ ಸರಕಾರವಾಗಲೀ ಯಾರನ್ನೂ ಓಲೈಸುವುದಿಲ್ಲ. ಬಿಜೆಪಿ ಸರಕಾರ ಇದ್ದಾಗಲೂ ಕೊಲೆಗಳು ನಡೆದಿವೆ. ಯಾರು ಸತ್ತರೂ ಮುಖ್ಯವೇ ಆಗುತ್ತದೆ. ಯಾರೋ ಏನೋ ಹೇಳಿದರೆಂದು ನಾನು ವಿಚಲಿತನಾಗುವವನಲ್ಲ. ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು. ವಾತಾವರಣ ತಿಳಿಯಾಗಬೇಕಷ್ಟೆ. ನಾಡಿದ್ದು ಮಂಗಳೂರಿಗೆ ಭೇಟಿ ಕೊಡುತ್ತಿದ್ದೇನೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.