ಬೆಂಗಳೂರು ಪೂರ್ವ ನಗರ ಪಾಲಿಕೆ: ನಿಯಮ ಉಲ್ಲಂಘಿಸುವ ಪಿಜಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಯುಕ್ತರ ಸೂಚನೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

2/20/20261 min read

ಮಹದೇವಪುರ: ನಗರದ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮತ್ತು ಸುರಕ್ಷತಾ ಮಾನದಂಡಗಳಿಲ್ಲದೆ ನಡೆಯುತ್ತಿರುವ ಪೇಯಿಂಗ್ ಗೆಸ್ಟ್ (ಪಿಜಿ)ಗಳ ವಿರುದ್ಧ ಸಮರ ಸಾರಲು ಪಾಲಿಕೆ ಮುಂದಾಗಿದೆ.

ಉಚ್ಚ ನ್ಯಾಯಾಲಯದ ಆದೇಶದನ್ವಯ ಆರೋಗ್ಯ ಮತ್ತು ನಗರ ಯೋಜನೆ ವಿಭಾಗದ ಅಧಿಕಾರಿಗಳನ್ನೊಳಗೊಂಡ ಜಂಟಿ ತಂಡವನ್ನು ರಚಿಸಲಾಗಿದ್ದು, 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಆಯುಕ್ತರಾದ ಡಿ.ಎಸ್. ರಮೇಶ್ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಆಯುಕ್ತರು, ಸಾರ್ವಜನಿಕರ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪಿಜಿ ತಪಾಸಣೆಗೆ ಮಾನದಂಡಗಳೇನು?:

ಜಂಟಿ ತಂಡವು ಪ್ರಮುಖವಾಗಿ ಈ ಕೆಳಗಿನ ಅಂಶಗಳನ್ನು ಪರಿಶೀಲಿಸಲಿದೆ:

ಸ್ಥಳಾವಕಾಶ: ಪ್ರತಿ ವ್ಯಕ್ತಿಗೆ ಕನಿಷ್ಠ 70 ಚದರ ಅಡಿ ಜಾಗವಿರಬೇಕು.

ಸುರಕ್ಷತೆ: ಸಿಸಿಟಿವಿ ಅಳವಡಿಕೆ ಹಾಗೂ 90 ದಿನಗಳ ಬ್ಯಾಕಪ್ ಕಡ್ಡಾಯ. ಅಗ್ನಿಶಾಮಕ ಇಲಾಖೆಯ ಎನ್‌ಒಸಿ (NOC) ಇರಬೇಕು.

ಆರೋಗ್ಯ: ಸುರಕ್ಷಿತ ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಮತ್ತು ಅಡುಗೆಕೋಣೆ ಇದ್ದಲ್ಲಿ FSSAI ಪ್ರಮಾಣಪತ್ರವಿರಬೇಕು.

ದಾಖಲೆ: ಕಟ್ಟಡ ನಕ್ಷೆ ಮಂಜೂರಾತಿ ಮತ್ತು ವಾಣಿಜ್ಯ ಪರವಾನಗಿ ಪರಿಶೀಲನೆ.

ಕಾಮಗಾರಿ ವಿಳಂಬಕ್ಕೆ ಬ್ರೇಕ್; ಗುತ್ತಿಗೆದಾರರಿಗೆ ಎಚ್ಚರಿಕೆ

ಮಹದೇವಪುರ ಮತ್ತು ಕೆ.ಆರ್.ಪುರ ವಲಯಗಳಲ್ಲಿ ಬಾಕಿ ಇರುವ ಕಾಮಗಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಆಯುಕ್ತರು, ಕೆಲಸ ಪೂರ್ಣಗೊಳಿಸದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ (Blacklist) ಸೇರಿಸಲು ಸೂಚಿಸಿದರು. "ರಸ್ತೆಗಳಲ್ಲಿ ಮೊದಲು ಒಳಚರಂಡಿ ಮತ್ತು ಸಿವಿಲ್ ಕೆಲಸ ಮುಗಿಸಿ, ನಂತರವಷ್ಟೇ ವೈಜ್ಞಾನಿಕವಾಗಿ ಡಾಂಬರೀಕರಣ ಮಾಡಬೇಕು" ಎಂದು ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಪ್ರಜ್ಞಾ ಅಮ್ಮಂಬಳ, ಜಂಟಿ ಆಯುಕ್ತರಾದ ಡಾ. ದಾಕ್ಷಾಯಿಣಿ.ಕೆ., ಡಾ. ಸುಧಾ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.