ಏಕಾಗ್ರತೆ ರೂಪವೇ ಇಷ್ಟ ಲಿಂಗ ಪೂಜೆ, ಅದುವೇ ನಿಜವಾದ ಭಗವಂತನ ಸೇವೆ:ಮಹಾಂತಲಿಂಗ ಶಿವಾಚಾರ್ಯ ಮಾಹಾಸ್ವಾಮಿ.
ಸ್ಥಳೀಯ ಸುದ್ದಿ


ಮಹದೇವಪುರ: ಮನುಷ್ಯನಲ್ಲಿರುವ ಅರಿಷಡ್ವರ್ಗಗಳ ನಿಯಂತ್ರಣ ಮತ್ತು ಒಳ್ಳೆಯ ಮಾರ್ಗಕ್ಕೆ ಲಿಂಗಪೂಜೆಯಿಂದ ಮನಸ್ಸಿನ ನಿಯಂತ್ರಣದಲ್ಲಿ ಎಲ್ಲವನ್ನು ಸಾಧಿಸುವ ಶಕ್ತಿ ಹೊಂದಬಹುದು ಎಂದು ಶ್ರೀ ಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಪಟ್ಟಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಷಡಾಕ್ಷರ ಬ್ರಹ್ಮ ಶ್ರೀ ಡಾ. ಮಹಾಂತಲಿಂಗ ಶಿವಾಚಾರ್ಯ ಮಾಹಾಸ್ವಾಮಿಗಳು ತಿಳಿಸಿದರು.
ಕ್ಷೇತ್ರದ ಕಾಟಂನಲ್ಲೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಮಹದೇವಪುರ ಕ್ಷೇತ್ರ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಲೋಕಕಲ್ಯಾಣಾರ್ಥವಾಗಿ ವಿಶ್ವಾವಸು ನಾಮ ಸಂವತ್ಸರದ ಶ್ರಾವಣ ಮಾಸದ ಮನೆ-ಮನೆಗಳಲ್ಲಿ ಶಿವಪೂಜೆ, ಶಿವಾನುಭವ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ - ವಚನ ಪ್ರವಚನ ಕಾರ್ಯಕ್ರಮದಲ್ಲಿ ಆಶಿರ್ವದಿಸಿ ಮಾತನಾಡಿದರು.
ಏಕಾಗ್ರತೆ ರೂಪವೇ ಇಷ್ಟ ಲಿಂಗ ಪೂಜೆ, ಅದುವೇ ನಿಜವಾದ ಭಗವಂತನ ಸೇವೆ. ಜತೆಗೆ ಸ್ವಯಂ ನಿರ್ಧಿಷ್ಟ ಗುರಿ ಸಾಧನೆಗೆ ಏಣಿ ಎಂದರು.
ನೂರಾರು ದೇವರ ನೆನೆಯುವದಕ್ಕಿಂತ ಇಷ್ಟಲಿಂಗ ಏಕದೇವೋಪಾಸನೆ ಮಾಡಿದರೆ ಇಷ್ಟಾರ್ಥಗಳು ಮನಸ್ಸಿನಂತೆ ಸಿದ್ಧಿಸುತ್ತವೆ, ಮನಸ್ಸು ನಿರ್ಮಲಗೊಳ್ಳುತ್ತದೆ. ಅಂಗದ ಮೇಲೆ ಲಿಂಗವ ಇಟ್ಟುಕೊಂಡು ಶಿವನ ಸ್ಮರಣೆ ಮಾಡಿದರೆ ಅದುವೇ ಜಗತ್ತಾಗುತ್ತದೆ ಎಂದು ತಿಳಿಸಿದರು.
ನಿತ್ಯ ಶಿವ ಪೂಜೆ ಮಾಡುವ ಒಂದು ಪದ್ದತಿ ನಮ್ಮ ಧರ್ಮದಲ್ಲಿದೆ. ಪ್ರತಿಯೊಬ್ಬ ವೀರಶೈವ ಲಿಂಗಾಯತರ ಕುಟುಂಬದಲ್ಲಿ ಪ್ರತಿಯೊಬ್ಬರು ಇಷ್ಟಲಿಂಗ ಪೂಜೆಯನ್ನು ಮಾಡಬೇಕು ಎಂಬುದನ್ನು ಜಾಗೃತಿ ಮೂಡಿಸುವ ಸಲುವಾಗಿಈ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ ಎಂದರು.
ಮಹಾಭಾರತ, ಭಗವದ್ಗೀತೆ, 18 ಸ್ಕಂದ ಪುರಾಣಗಳನ್ನು ಬರೆದಿರುವ ವ್ಯಾಸ ಮಹರ್ಷಿಗಳು ಹೇಳಿರುವ ಹಾಗೇ ವೀರಶೈವ ಲಿಂಗಾಯತರು ತಮ್ಮ ದೇಹದ ಮೇಲೆ ನಿತ್ಯ ಲಿಂಗವನ್ನು ದರಿಸಿ, ಪ್ರತಿನಿತ್ಯ ತಮ್ಮ ಎಡ ಹಸ್ತದಲ್ಲಿ ಲಿಂಗವನ್ನು ಇಟ್ಟುಕೊಂಡು ಲಿಂಗವನ್ನು ನೋಡುತ್ತ ಓಂ ನಮಃ ಶಿವಾಯ, ಓಂ ನಮಃ ಶಿವಾಯ ಎಂದು ಜಪಾ ಮಾಡಬೇಕು ಎಂದರು.
ಸಮಾಜದಲ್ಲಿ ಹಲವಾರು ಮತಗಳು ಇವೆ, ಅನೇಕ ರೀತಿಯಲ್ಲಿ ಧರ್ಮಗಳಿವೆ, ಅವರವರ ಧರ್ಮ ಅವರಿಗೆ ಶ್ರೇಷ್ಠವಾಗಿರುತ್ತದೆ. ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾನೆ ಅವನನ್ನು ಪರಮಾತ್ಮ ರಕ್ಷಣೆ ಮಾಡುತ್ತಾರೆ. ನಮ್ಮ ನಮ್ಮ ಧರ್ಮದ ರಕ್ಷಣೆ ಮಾಡಬೇಕು ಉತ್ತಮ ಸಮಾಜ ನಡೆಸಬೇಕು ಎಂದರು.
ಮಹದೇವಪುರ ಕ್ಷೇತ್ರ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಹೇಂದ್ರ ಮೋದಿ ಮಾತನಾಡಿ, ಶ್ರಾವಣ ಮಾಸದ ಕಾರ್ಯಕ್ರಮ ಸತತ 18 ವರ್ಷದಿಂದ ಕ್ಷೇತ್ರದ ಇಮ್ಮಡಹಳ್ಳಿ, ವರ್ತೂರು, ಎ.ಇ.ಸಿ.ಎಸ್ ಲೇಔಟ್ ಸರ್ಜಾಪುರ ರಸ್ತೆ ಸೇರಿದಂತೆ ಹಲವಾರು ಭಾಗಗಳಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಸಮಾಜದ ಬಂಧುಗಳು ಒಂದೆಡೆ ಸೇರಿ ಶಿವನ ಜ್ಞಾನ ಮಾಡುವುದರ ಜೊತೆಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯಕ್ಕಾಗಿ ಮಕ್ಕಳಿಗೆ ಸಂಸ್ಕಾರ ಬೆಳೆಸಲು ಒಂದು ಉತ್ತಮ ವೇದಿಕೆ, ಪ್ರತಿವರ್ಷವೂ ಹೀಗೆಯೇ ಮುಂದುವರಿಸಿಕೊಂಡು ಹೋಗುವ ಗುರಿ ನಮ್ಮದಾಗಿದೆ ಎಂದರು.
ಶ್ರಾವಣ ಮಾಸದಲ್ಲಿ ಶಿವಪೂಜೆಯನ್ನು ಮಾಡುವ ಮೂಲಕ ನಮ್ಮ ಪುಣ್ಯ ಕಾರ್ಯಗಳನ್ನು ಹೆಚ್ಚಿಸುತ್ತ ದೇವರಿಗೆ ಗುರುಗಳ ಮೂಲಕ ಪೂಜೆ ಸಲ್ಲಿಸಿದರೆ ಹೆಚ್ಚು ದೇವರ ಆಶೀರ್ವಾದ ಸಿಗುತ್ತದೆ ಎನ್ನುವ ಪ್ರತೀತಿ ಇದೆ. ಈ ಶ್ರಾವಣದಲ್ಲಿ ಗುರುಗಳ ಪಾದಪೂಜೆ, ಗುರುಗಳ ಸಾನಿಧ್ಯದಲ್ಲಿರುವುದು ಪವಿತ್ರವಾಗಿರುವ ಕೆಲಸ ಮತ್ತು ಈ ಮಾಸದಲ್ಲಿ ಯಾರು ಗುರು ಸೇವೆ ಮಾಡುತ್ತಾರೋ ಅಂತಹವರಿಗೆ ದೇವರು ಒಲಿಯುತ್ತಾರೆ ಎನ್ನುವ ನಂಬಿಕೆ ಇದೆ.
ಈ ಸಂದರ್ಭದಲ್ಲಿ ಬಿ.ಎನ್.ಪ್ರಕಾಶ್, ಪಂಚಾಕ್ಷರಿ ಹಿರೇಮಠ್, ಬೈರತಿ ಕುಮಾರ್, ಕಾರ್ತಿಕ್, ಶಿವುಗುರು, ರಘು ಕುಮಾರ್, ಮೋಹನ್, ಯೋಗೇಶ್ ಆರಾಧ್ಯ, ಪ್ರಸಾದ್ ಬಾಬು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸ್ಥಳೀಯ ಮುಖಂಡರು, ಭಕ್ತರು, ಪದಾಧಿಕಾರಿಗಳು ಇತರರು ಇದ್ದರು.