ಶಬರಿಮಲೆಯಲ್ಲಿ ಜನದಟ್ಟಣೆ:ಪರಿಸ್ಥಿತಿ ನಿಭಾಯಿಸಲು ದೇವಸ್ಥಾನ ಮಂಡಳಿ ಹರಸಾಹಸ.

ದೇಶ/ವಿದೇಶರಾಜ್ಯ

ಧರ್ಮ ಬಸವನಪುರ.

11/19/20251 min read

ತಿರುವನಂತಪುರ: ಶಬರಿಮಲೆ ದೇವಸ್ಥಾನ ತೆರೆದ 48 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಅಯ್ಯಪ್ಪ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಜನದಟ್ಟಣೆ ಉಂಟಾಗಿ ಕೋಯಿಕ್ಕೋಡ್‌ ನ ಕೊಯಿಲಾಂಡಿ ಮೂಲದ 58 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಪ್ರಸಿದ್ಧ ವಾರ್ಷಿಕ ಶಬರಿಮಲೆ ಅಯ್ಯಪ್ಪನ 'ಮಂಡಲ ಮಕರವಿಳಕ್ಕು' ಯಾತ್ರೆ ಆರಂಭವಾದ 2ನೇ ದಿನವೇ ಭಾರಿ ಅವ್ಯವಸ್ಥೆ ಉಂಟಾಗಿದ್ದು, 48 ಗಂಟೆಯಲ್ಲಿ ಕರ್ನಾಟಕದ ಭಕ್ತರು ಸೇರಿ 2 ಲಕ್ಷ ಭಕ್ತರು ಆಗಮಿಸಿದ ಕಾರಣ ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿದೆ.

ದೇವಸ್ಥಾನದ ಬಾಗಿಲು ತೆರೆದ ಎರಡೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಆಗಮಿಸಿದ ಭಕ್ತರನ್ನು ನಿಯಂತ್ರಿಸಲು ತಿರುವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಕೊರೆಯುವ ಚಳಿಯ ನಡುವೆಯೂ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಅಯ್ಯಪ್ಪನ ಸನ್ನಿಧಿಯ 18 ಮೆಟ್ಟಿಲುಗಳನ್ನು ಹತ್ತುವ ಪ್ರದೇಶದಲ್ಲಿ ಭಾರೀ ನೂಕುನುಗ್ಗಲು ಉಂಟಾಗಿದೆ.

ದರ್ಶನ ಪಡೆಯಲು 10 ತಾಸಿಗೂ ಹೆಚ್ಚಿನ ಅವಧಿ ಹಿಡಿಯುತ್ತಿದೆ. ಹೀಗಾಗಿ ಹಲವು ಭಕ್ತರು ದರ್ಶನ ಸಾಧ್ಯವಾಗದೆ ಪಂಪಾದಲ್ಲಿ ತುಪ್ಪದ ಸೇವೆ ಸಲ್ಲಿಸಿ ವಾಪಸಾಗುತ್ತಿರುವ ವರದಿಗಳೂ ಕೇಳಿಬಂದಿವೆ. ಸಾಮಾನ್ಯವಾಗಿ ನಿತ್ಯ 90 ಸಾವಿರ ಮಂದಿಗಷ್ಟೇ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಬಾರಿ ಮಿತಿ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದರಿಂದ ದೇವಸ್ಥಾನದ ಆಡಳಿತವು ಅಗತ್ಯ ಸೌಲಭ್ಯ ಕಲ್ಪಿಸಲು ಪರದಾಡುತ್ತಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಶಬರಿಮಲೆಗೆ ತೆರಳುತ್ತಿದ್ದ ಬಸ್ ಪಲ್ಟಿ: ಪ್ರಾಣಾಪಾಯದಿಂದ ಪಾರಾದ 33 ಮಾಲಧಾರಿಗಳು

ಮಂಡ್ಯ, ನವೆಂಬರ್ 18:ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಮಂಡ್ಯ ಜಿಲ್ಲೆಯ ಭಕ್ತರ ಬಸ್ ಕೇರಳದಲ್ಲಿ ಚಾಲಕನ ನಿಯಂತ್ರ ತಪ್ಪಿ ಪಲ್ಟಿ ಹೊಡೆದಿದೆ. ಆದರೆ ಬಸ್‌ನಲ್ಲಿದ್ದ 33 ಮಂದಿ ಮಾಲಾಧಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ದುರಂತ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎರುಮೇಲಿ (ಏರಿಮಲೈ) ಸಮೀಪದ ತಟ್ಟಿಪಿಟ್ಟಂ ಎಂಬಲ್ಲಿ ನಡೆದಿದೆ. ಕೇರಳದತ್ತ ಪ್ರಯಾಣ ಮುಂದುವರೆದ ಬಸ್‌ ಬೆಳಗ್ಗೆ ಏರಿಮಲೈ-ತಟ್ಟಿಪಿಟ್ಟಮ್ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಗೆ ಪಲ್ಟಿ ಹೊಡೆದಿದೆ. ಅಪಘಾತಕ್ಕೀಡಾದ ಬಸ್ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಯಾಲದಹಳ್ಳಿ ಕೊಪ್ಪಲು ಗ್ರಾಮದವರಾಗಿದ್ದಾರೆ. ಈ ಗ್ರಾಮದ ಅಯ್ಯಪ್ಪ ಭಕ್ತರು ಶಬರಿಮಲೆ ಮಾಲಾಧಾರಿಗಳಾಗಿ 41 ದಿನಗಳ ವ್ರತವನ್ನು ಪಾಲಿಸಿ, ಕಪ್ಪು ವಸ್ತ್ರ ಧರಿಸಿ, ಮಾಲೆ ಹಾಕಿಕೊಂಡು ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದರು.

ಅಪಘಾತ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಸ್ಥಳೀಯರು ಮತ್ತು ಇತರ ಯಾತ್ರಿಗಳ ಸಹಾಯದಿಂದ ಎಲ್ಲ ಭಕ್ತರನ್ನು ಬಸ್‌ನಿಂದ ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಕೆಲವರಿಗೆ ಎರುಮೇಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Predict the future

You didn’t come this far to stop