ಕೆ.ಆರ್.ಪುರ: ಗ್ಯಾಸ್ ಸಿಲಿಂಡರ್ ಸ್ಫೋಟ ವೃದ್ಧೆ ಸಾವು, ಮೂವರಿಗೆ ಗಾಯ, ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ತ್ರಿವೇಣಿ ನಗರದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ದೊಡ್ಡ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಒಂದು ಮನೆ ಸಂಪೂರ್ಣವಾಗಿ ನೆಲಸಮವಾಗಿದ್ದು, 80 ವರ್ಷದ ವೃದ್ಧೆ ಅಕ್ಕಯಮ್ಮ ಮೃತಪಟ್ಟಿದ್ದಾರೆ.
ಮನೆ ಅವಶೇಷಗಳಲ್ಲಿ ಸಿಲುಕಿದ ಶೇಖರ್ (52), ಕಿರಣ್ (22) ಮತ್ತು ಚಂದನ್ (25) ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೆಆರ್ ಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಸ್ಥಳೀಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಗೆ ಕೈಹಾಕಿದರು. ಕಟ್ಟಡದ ಅವಶೇಷಗಳ ಕೆಳಗೆ ಸಿಲುಕಿದವರನ್ನು ಹೊರತೆಗೆದು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಬೈರತಿ ಬಸವರಾಜ ಭೇಟಿ ಸಮಗ್ರ ತನಿಖೆಗೆ ಆಗ್ರಹ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಕ್ಕಯ್ಯಮ್ಮ ಎಂಬವರು ಮೃತಪಟ್ಟಿದ್ದು, ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಈ ಸ್ಫೋಟ ಹೇಗೆ ಸಂಭವಿಸಿತು? ಇದು ಕೇವಲ ಅನಿಲ ಸಿಲಿಂಡರ್ ಸ್ಫೋಟದಿಂದ ಸಂಭವಿಸಿದ್ದೆ ಅಥವಾ ಬೇರೆ ಏನಾದರೂ ಕಾರಣವಿದೆಯೆ ಎಂಬುದರ ಕುರಿತು ಎಫ್‍ಎಸ್‍ಎಲ್ ವರದಿ ಬರಬೇಕು ಎಂದು ಹೇಳಿದರು
ನಗರದ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ತ್ರಿವೇಣಿನಗರದಲ್ಲಿ ಸಂಭವಿಸಿದ ದೊಡ್ಡ ಪ್ರಮಾಣದ ಸ್ಫೋಟದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಒತ್ತಾಯಿಸಿದ್ದಾರೆ.
ಮನೆ ಪೂರ್ತಿ ಹಾನಿಗೆ ಒಳಗಾಗಿದೆ. ಸತ್ಯ ಹೊರಬರಲು ಅತ್ಯಂತ ಪ್ರಾಮಾಣಿಕವಾಗಿ ಫಾರೆನ್ಸಿಕ್ ವರದಿ ಲಭಿಸಬೇಕು. ಇಂಥ ಘಟನೆಗಳಿಂದ ಜನರು ಭಯಭೀತರಾಗುತ್ತಾರೆ ಎಂದು ಹೇಳಿದರು.
ಇಷ್ಟೊಂದು ದೊಡ್ಡ- ಬಲಿಷ್ಠ ಮನೆ ಕುಸಿತಕ್ಕೆ ಬಲವಾದ ಕಾರಣ ಇರಬೇಕು. ಸ್ಫೋಟಕ್ಕೆ ಗ್ಯಾಸ್ ಕಾರಣವೇ? ಬೇರೆ ಸ್ಫೋಟಕ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
ಮೃತರಿಗೆ ಸರಕಾರವು ತಕ್ಷಣ ಪರಿಹಾರ ಕೊಡಬೇಕು. ಗಾಯಾಳುಗಳಿಗೆ ಉಚಿತವಾದ ಚಿಕಿತ್ಸೆಯನ್ನು ಸರಕಾರ ಕೊಡಿಸಬೇಕು ಎಂದು ತಿಳಿಸಿದರು.
ದುರ್ಘಟನೆಯಿಂದ ಅಕ್ಕಪಕ್ಕದ ಮನೆಗಳಿಗೂ ತೊಂದರೆಯಾಗಿದೆ. ಪಕ್ಕದ ಮನೆಯವರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಹಳ ಎತ್ತರದ ವರೆಗೆ ಗಾಜುಗಳು ಒಡೆದಿವೆ. ಪೊಲೀಸ್ ಅಧಿಕಾರಿಗಳು, ಅಗ್ನಿಶಾಮಕ ದಳ, ಜನರು ಬಂದು ನೆರವಾಗಿದ್ದಾರೆ ಎಂದರು. ಸ್ಫೋಟದ ಕಾರಣಕರ್ತರನ್ನು ಪತ್ತೆ ಮಾಡಬೇಕು. ಇದರ ಸಮಗ್ರ ತನಿಖೆ ಮಾಡಬೇಕು ಎಂದು ತಿಳಿಸಿದರು.
ಅಕ್ಕಪಕ್ಕದ ಮನೆಗಳಿಗೆ ಆದ ಹಾನಿಯ ನಷ್ಟವನ್ನು ಭರಿಸಬೇಕು. ಭಾರತ್ ಪೆಟ್ರೋಲಿಯಂ ಸಿಲಿಂಡರ್ ಎಂಬ ಮಾಹಿತಿ ಸಿಕ್ಕಿದೆ. ಅವರೂ ತನಿಖೆ ನಡೆಸಬೇಕು ಎಂದು ತಿಳಿಸಿದರು.
ಶಾಸಕ ಬೈರತಿ ಬಸವರಾಜ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಆಗಿರುವ ಈ ಘಟನೆ ನೋಡಿ ದಿಗ್ಭ್ರಾಂತನಾಗಿದ್ದೇನೆ. ಅಡುಗೆ ಅನಿಲ ಸಿಲಿಂಡರ್ ಸೋರಿಕೆಯೆ ಅಥವಾ ಬೇರೆ ಏನಾದರೂ ಕಾರಣವಿದೆಯೆ ಎಂಬುದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸಿಲಿಂಡರ್ ಸ್ಫೋಟದಿಂದ ಇಷ್ಟು ದೊಡ್ಡ ಪ್ರಮಾಣದ ಹಾನಿ ಸಂಭವಿಸುವುದು ಅನುಮಾನ ಎಂದು ಹೇಳಿದರು.
ಮನೆಯಲ್ಲಿ ಸ್ಫೋಟಕ ಏನಾದರೂ ಶೇಖರಿಸಿ ಇಟ್ಟಿದ್ರಾ? ಅದು ಸ್ಫೋಟಗೊಂಡು ಈ ದುರ್ಘಟನೆ ಆಗಿದೆಯೇ? ಅನ್ನೋದು ಗೊತ್ತಾಗಬೇಕು. ಜನರಲ್ಲಿ ಹಲವಾರು ಅನುಮಾನಗಳು ಮೂಡುತ್ತಿವೆ. ಅವುಗಳನ್ನು ನಿವಾರಣೆ ಮಾಡಲು ಸರಿಯಾದ ರೀತಿಯಲ್ಲಿ ತನಿಖೆಯಾಗಬೇಕು. ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಭರವಸೆ ನೀಡಿದರು.

