ಸಿಜೆಐ ಗವಾಯಿ ಮೇಲೆ ಶೂ ಎಸೆತ ಘಟನೆ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

10/8/20251 min read

ಕೆ.ಆರ್.ಪುರ: ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಅವರ ಮೇಲೆ ಕೋರ್ಟ ಹಾಲ್ ನಲ್ಲಿ ವಕೀಲ ರಾಕೇಶ ಕಿಶೋರ್ ಎಂಬ ವ್ಯಕ್ತಿ ತನ್ನ ಶೂ ಬಿಚ್ಚಿ ಮುಖ್ಯ ನ್ಯಾಯಮೂರ್ತಿ ಗಳಿಗೆ ಎಸೆಯಲು ಪ್ರಯತ್ನಿಸಿದ ಘಟನೆಯನ್ನು ವಿರೋಧಿಸಿ ದಲಿತ ಸಂಘಟನೆಗಳ ಮುಖಂಡರು ಕೆ.ಆರ್.ಪುರದ ತಹಶಿಲ್ದಾರ ಕಚೇರಿಯ ಅಂಬೇಡ್ಕರ್ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಸೇವಾ ಸಮಿತಿ ರಾಜ್ಯಾಧ್ಯಕ್ಷ ಡಾ. ರಾಮಚಂದ್ರ ಅವರು ಈ ಘಟನೆಯಿಂದ ಇಡೀ ದೇಶದ ಜನರ ಮನಸಿಗೆ ಘಾಸಿಯಾಗಿದೆ. ರಾಕೇಶ ಕಿಶೋರ್ ಅನ್ನುವ ಸನಾತನವಾದಿ ಜಸ್ಟಿಸ್ ಗವಾಯಿ ಅವರಿಗೆ ಮಾತ್ರ ಅವಮಾನ ಮಾಡಿಲ್ಲ, ಇಡೀ ನ್ಯಾಯಾಂಗ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ. ಕೊಡಲೇ ಅವರನ್ನು ಬಾರ್ ಕೌನ್ಸಿಲ್ ನಿಂದ ಅಮಾನತ್ತು ಮಾಡಬೇಕು ಎಂದು ಒತ್ತಾಯಿಸಿದರು.

ಭಾರತದ ಇತಿಹಾಸದಲ್ಲಿ ಇದು ಕಪ್ಪು ಚುಕ್ಕೆಯಾಗಿದೆ. ಸಂವಿಧಾನಾತ್ಮಕವಾಗಿ ಸುಪ್ರೀಂ ಕೋರ್ಟ್ ನಲ್ಲಿ ಉನ್ನತ ಹುದ್ದೆಯಲ್ಲಿರುವ ಮುಖ್ಯನ್ಯಾಯಮೂರ್ತಿಯ ಮೇಲೆ ವಕೀಲನು ಶೂ ಎಸೆದು ಅಪಮಾನ ಮಾಡಿರುವುದು ಖಂಡನೀಯ. ಇದನ್ನು ತೀವ್ರವಾಗಿ ಎಲ್ಲಾ ಸಂಘಟನೆಗಳು ಖಂಡಿಸುತ್ತದೆ ಎಂದು ತಿಳಿಸಿದರು.

ಇದು ದೇಶದ್ರೋಹ ಕೃತ್ಯ ಮತ್ತು ಸಂವಿಧಾನದ ಮೇಲೆ ನಡೆದ ವ್ಯವಸ್ಥಿತ ದಾಳಿ. ಧರ್ಮದ ಹೆಸರಿನಲ್ಲಿ ಈ ರೀತಿಯ ಅಸಹಿಷ್ಣುತೆಯ ನಡೆ ದೇಶದ ಭವಿಷ್ಯಕ್ಕೆ ಅಪಾಯಕಾರಿಯಾಗಿದೆ. ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಿ ಗಲ್ಲು ಶಿಕ್ಷೆ ವಿಧಿಸಬೇಕು. ಈ ದೇಶದ ಕಾನೂನು ಮತ್ತು ಸಂವಿಧಾನ ಉಳಿಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಯುವಶಕ್ತಿ ಸೂರಿ, ಎಂ.ಆರ್.ವೆಂಕಟೇಶ,ಕಾವೇರಪ್ಪ ಇದ್ದರು.