ದಸರಾ: 70ಕ್ಕೂ ಹೆಚ್ಚು ಗ್ರಾಮದೇವತೆಗಳ ಅದ್ದೂರಿ ಪಲ್ಲಕ್ಕಿ ಉತ್ಸವ.

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

10/4/20251 min read

ಮಹದೇವಪುರ: ವೈಟ್ ಫೀಲ್ಡ್ ನ ಡಾ.ಬಿ.ಆರ್. ಅಂಬೇಡ್ಕರ್ ನಗರದಲ್ಲಿ ( ಪಟ್ಟಂದೂರು ಗುಟ್ಟ) ನಾಡ ಹಬ್ಬ ದಸರಾ ಮಹೋತ್ಸವ ಪ್ರಯುಕ್ತ ಹಾಗೂ ಸುತ್ತಮುತ್ತಲಿನ ಗ್ರಾಮ ದೇವತೆಗಳ 70 ಕ್ಕೂ ಹೆಚ್ಚು ಪಲ್ಲಕ್ಕಿ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಉತ್ಸವದ ಅಂಗವಾಗಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಹಾಗೂ ಶಾಸಕಿ ಮಂಜುಳಾ ಲಿಂಬಾವಳಿ ಭೇಟಿ ನೀಡಿ ಪೂಜೆ ಸಲ್ಲಿಸಿದರು ಅನ್ನದಾನಕ್ಕೆ ಚಾಲನೆ ನೀಡಿದರು.

ವೈಟ್ ಫೀಲ್ಡ್ ಸಮೀಪದ ಅಂಬೇಡ್ಕರ್ ಗುಟ್ಟದಲ್ಲಿ ತಲತಲಾಂತರದಿಂದ ದಸರಾ ಉತ್ಸವ ನಡೆಯುತ್ತಾ ಬರುತ್ತಿದ್ದು. ಪ್ರತಿ ವರ್ಷದಂತೆ ನಾಡ ಹಬ್ಬ ದಸರಾ ಮಹೋತ್ಸವ ಪ್ರಯುಕ್ತ ನಾಗೊಂಡನಹಳ್ಳಿ, ನಲ್ಲೂರಹಳ್ಳಿ, ಇಮ್ಮಡಿಹಳ್ಳಿ, ಕಾಡುಗೋಡಿ, ಚನ್ನಸಂದ್ರ, ಹಗದೂರು, ಪಟ್ಟಂದೂರು ಅಗ್ರಹಾರ,ಚನ್ನಸಂದ್ರ,ದಿನ್ನೂರು,ಬೆಳತ್ತೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಸವಾರಮ್ಮ, ಮಾರಮ್ಮ, ಗಂಗಮ್ಮ, ಸಪಲಮ್ಮ, ಏಳುಮಂದೆಮ್ಮ, ಮರಿಯಮ್ಮ, ಯಲ್ಲಮ್ಮ, ಸುಗ್ಗಲಮ್ಮ ಮುನೇಶ್ವರ,ಸುಬ್ರಹ್ಮಣ್ಯ, ಚಾಮುಂಡೇಶ್ವರಿ,ದೊಡ್ಡಮ್ಮ,ಆಂಜನೇಯಸ್ವಾಮಿ,ಶನಿಮಹತ್ಮ ಸೇರಿದದಂತೆ ಹಲವಾರು ದೇವರುಗಳನ್ನು ಪಲ್ಲಕ್ಕಿಗಳಲ್ಲಿ ಅಂಬೇಡ್ಕರ್ ನಗರದವರಗೂ ಮೆರವಣಿಗೆ ಬರವ ಪದ್ದತಿ ರೂಡಿಯಲ್ಲಿದೆ. ದೇವರ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದರು.

ಗ್ರಾಮದೇವತೆಗಳ ಉತ್ಸವದಲ್ಲಿ ಮಹಿಳೆಯರು ಕುಂಭ ಕಳಸದೊಂದಿಗೆ ಭಾಗವಹಿಸಿದ್ದರು. ಡೊಳ್ಳು ಕುಣಿತ, ಗೊಂಬೆಗಳ ಕುಣಿತ, ಹಲಗೆ, ವೀರಗಾಸೆ,ಕೇರಳ ತಮಟೆ ವಾದ್ಯ ಸೇರಿದಂತೆ ಹಲವು ಕಲಾತಂಡಗಳು ಸಾರ್ವಜನಿಕರ ಗಮನ ಸೆಳೆಯಿತು.

ಉತ್ಸವದಲ್ಲಿ ದೇವರಿಗೆ ವಿಶೇಷ ಪೂಜೆ, ಬಗೆ ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ಮಂಗಳವಾದ್ಯದ ತಂಡಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ದೇವರ ಮೇರವಣಿಗೆ ಮಾಡಲಾಯಿತು. ಸಮಿತಿ ವತಿಯಿಂದ ನೆರೆದಿದ್ದ ಭಕ್ತಾದಿಗಳಿಗೆ ಅನ್ನ ದಾಸೋಹ ಏರ್ಪಡಿಲಾಗಿತ್ತು.

ಈ ಸಂದರ್ಭದಲ್ಲಿ ದಸರಾ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಸ್. ಮಾರಪ್ಪ, ಮಾಜಿ ಸಂಸದ ಎಸ್.ಮುನಿಸ್ವಾಮಿ,ಮಾಜಿ ಪಾಲಿಕೆ ಸದಸ್ಯ ಆಂಜನೇಯ ರೆಡ್ಡಿ, ಕ್ಷೇತ್ರ ನಗರ ಮಂಡಲದ ಅಧ್ಯಕ್ಷ ಎನ್. ಆರ್. ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್. ಎಸ್.ಪಿಳ್ಳಪ್ಪ, ನಿಕಟಪೂರ್ವ ಅಧ್ಯಕ್ಷ ಮನೋಹರ ರೆಡ್ಡಿ, ಮಹೇಂದ್ರ ಮೋದಿ, ಎಲ್.ರಾಜೇಶ್, ವೈಟ್ ಫೀಲ್ಡ್ ಪ್ರಭು, ರವಿ, ಬಿ.ಎಸ್.ಶ್ರೀಧರ್ ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Predict the future

You didn’t come this far to stop