11 ಯುವಕರ ಸಾವು, ಇದು ಕೊಲೆಗಡುಕ ಸರ್ಕಾರ, ಮೃತರ ಕುಟುಂಬಕ್ಕೆ 1ಕೋಟಿ ಪರಿಹಾರ, ಸರ್ಕಾರಿ ನೌಕರಿಗೆ ಒತ್ತಾಯ-ಶಾಸಕ ಧೀರಜ್ ಮುನಿರಾಜ್
ರಾಜ್ಯ


ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ 11 ಜನ ಅಮಾಯಕ ಯುವಕರ ಸಾವಾಗಿದೆ. ಇದು ಕೊಲೆಗಡುಕ ಸರ್ಕಾರ, ಸಿಎಂ ಸಿದ್ದರಾಮಯ್ಯನವರೇ ಇದಕ್ಕೆ ನೇರ ಹೊಣೆ, ಈ ಕೂಡಲೇ ರಾಜೀನಾಮೆ ನೀಡಿ ರಾಜ್ಯದ ಜನತೆಗೆ ಕ್ಷಮೆ ಕೇಳಬೇಕು ಎಂದು ಶಾಸಕ ಹಾಗೂ ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಅವರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
18 ವರ್ಷದ ಬಳಿಕ ಆರ್ಸಿಬಿ ತಂಡವು ಚೊಚ್ಚಲ ಕಪ್ ಗೆದ್ದು ಬೀಗಿದೆ, ಬೆಂಗಳೂರು ತಂಡವನ್ನು ಸನ್ಮಾನಿಸುವ ಭರದಲ್ಲಿ ರಾಜ್ಯ ಸರ್ಕಾರ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದೇ ಆರ್ಸಿಬಿ ಅಭಿಮಾನಿಗಳಿಗೆ ಸೂತಕದ ವಾತಾವರಣವನ್ನು ಸೃಷ್ಟಿಸಿದೆ.
ವಿಧಾನಸೌಧ ಆವರಣದಲ್ಲಿ ಆರ್ಸಿಬಿ ತಂಡಕ್ಕೆ ಸನ್ಮಾನ ಮಾಡುವುದು ಬೇಡ ಎಂದು ಇದಕ್ಕೂ ಮುನ್ನ ಗುಪ್ತಚರ ಇಲಾಖೆ, ಗೃಹ ಇಲಾಖೆ ಸೇರಿದಂತೆ ಎಲ್ಲಾ ಮೂಲಗಳೂ ಎಚ್ಚರಿಸಿದ್ದರೂ ಅದೆಲ್ಲವನ್ನೂ ಕಡೆಗಣಿಸಿ ರಾಜಕೀಯ ಲಾಭಪಡೆಯುವ ದುರುದ್ದೇಶದಿಂದ ಕಾರ್ಯಕ್ರಮ ಆಯೋಜಿಸಿ 11 ಮುಗ್ದ ಅಮಾಯಕರ ಜೀವ ಕಳೆದಿದ್ದಾರೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.
ಆರ್ಸಿಬಿ ತಂಡವನ್ನು ಅಭಿನಂದಿಸುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ಆದರೇ, ಇದು ರಾಜ್ಯದ ಕಾರ್ಯಕ್ರಮವಾ ಅಥವಾ ಪಕ್ಷದ ಕಾರ್ಯಕ್ರಮವಾ? ಇದನ್ನೂ ಕೇಲವ ರಾಜಕೀಯ ಲಾಭಕ್ಕಾಗಿ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯದ ವಿರೋಧ ಪಕ್ಷದ ನಾಯಕರಿಗಾಗಲಿ ಅಥವಾ ಶಾಸಕರಿಗಾಗಲಿ ಆಹ್ವಾನ ನೀಡಿಲ್ಲ, ಕಾಂಗ್ರೆಸ್ ಮುಖಂಡರು ಅವರ ಮಕ್ಕಳು, ಮೊಮ್ಮಕ್ಕಳು ಮಾತ್ರ ವೇದಿಕೆಯಲ್ಲಿದ್ದರು ಇದನ್ನು ಪಾರ್ಟಿ ಕಾರ್ಯಕ್ರಮದಂತೆ ಬಿಂಭಿಸಿದ್ದಾರೆ ಎಂದರು.
ಇದೇ ವೇಳೆ, ಇಡೀ ವಿಶ್ವದಲ್ಲೆ ಜಾತ್ಯಾತೀತ ಸಂಸ್ಕೃತಿ ಎಂದರೇ ಅದು ಹಿಂದು ಸನಾತನ ಧರ್ಮ ಮಾತ್ರ, ಇದರ ವಿರುದ್ದ ದಬ್ಬಾಳಿಕೆ ಮಾಡುವುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡಬೇಕು, ಹಿಂದುಪರ ಹೋರಾಟಗಾರನ್ನು ಟಾರ್ಗೆಟ್ ಮಾಡಿ ರಾಜ್ಯ ಸರ್ಕಾರ ದುರಾಡಳಿತ ನಡೆಸುತ್ತಿದೆ. ಬಿಜೆಪಿ ಕಾರ್ಯಕರ್ತರ ಪರ ನಾವಿದ್ದೇವೆ, ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೃತರ ಕುಟುಂಬಕ್ಕೆ 1 ಕೋಟಿ ನಷ್ಟ ಪರಿಹಾರಕ್ಕೆ ಆಗ್ರಹ:
ಬೆಂಗಳೂರಿನ ವಿಧಾನಸೌಧ ಆವರಣದಲ್ಲಿ ತಮ್ಮ ನೆಚ್ಚಿನ ತಂಡದ ಆಟಗಾರರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಜಮಾಯಿಸಿದ್ದರು. ಸ್ಥಳದಲ್ಲಿ ಉಂಟಾದ ನೂಕುನುಗ್ಗಲಿನಿಂದ 11 ಜನರ ಸಾವಿಗೀಡಾಗಿದ್ದಾರೆ. ಇದಕ್ಕೆ ನೇರ ಹೊಣೆ ರಾಜ್ಯ ಸರ್ಕಾರ, ಸದ್ಯ ಈಗ ಘೋಷಿಸಿರುವ 10 ಲಕ್ಷ ಪರಿಹಾರದಿಂದ ಯುವಕರ ಸಾವಿಗೆ ನ್ಯಾಯ ಸಿಗುವುದಿಲ್ಲ ಹೀಗಾಗಿ ಕನಿಷ್ಟ 1ಕೋಟಿ ಪರಿಹಾರ ಜೊತೆಗೆ ಮೃತರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜಿಲ್ಲಾ ವಕ್ತಾರರಾದ ಪುಷ್ಪಶಿವಶಂಕರ್, ನಗರಸಭಾ ಸದಸ್ಯ ಬಂತಿ ವೆಂಕಟೇಶ್, ದೊಡ್ಡಬಳ್ಳಾಪುರ ನಗರಾಧ್ಯಕ್ಷ ಮುದ್ದಪ್ಪ, ಮುಖಂಡರಾದ ಮಂಜಣ್ಣ ಸೇರಿದಂತೆ ಇತರರು ಇದ್ದರು.