ರೈಲ್ವೆ ಅಪಘಾತ ಸಂಭವಿಸಿದಾಗ ಹೇಗೆ ಶೀಘ್ರ ರಕ್ಷಣಾ ಕಾರ್ಯಾಚರಣೆ ನಡೆಯುತ್ತದೆ ಗೊತ್ತಾ...!

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

9/12/20251 min read

ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ವತಿಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (NDRF), ರೈಲ್ವೇ ರಕ್ಷಣಾ ಪಡೆ (RPF), ರಾಜ್ಯ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಹೋಮ್ ಗಾರ್ಡ್ಸ್, ರೆಡ್ ಕ್ರಾಸ್ , ರೈಲ್ವೆ ವೈಧ್ಯಕೀಯ ಸಿಬ್ಬಂದಿ ಮತ್ತು ರೈಲ್ವೆ ನಾಗರಿಕ ಸುರಕ್ಷಣಾ ಸಂಸ್ಥೆಗಳ ಸಹಯೋಗದಲ್ಲಿ ಇಂದು ಹುಬ್ಬಳ್ಳಿ ರೈಲ್ವೆ ಯಾರ್ಡ ಆವರಣದಲ್ಲಿ ರೈಲ್ವೆ ಅಪಘಾತದ ವಿಪತ್ತು ನಿರ್ವಹಣೆಯ ಕುರಿತು ಅಣುಕು ಪ್ರದರ್ಶನ ನಡೆಯಿತು.

ಈ ಅಣುಕು ಪ್ರದರ್ಶನವು ರೈಲ್ವೆಯ ಅಪಘಾತ ಸಂಭವಿಸಿದಾಗ ಅದರ ನಿರ್ವಹಣೆ ಮತ್ತು ಶೀಘ್ರ ಕಾರ್ಯಾಚರಣೆಯ ಉದ್ದೇಶದಿಂದ ಆಯೋಜಿಸಲಾಗಿದ್ದು, ಇದರ ಭಾಗವಾಗಿ, ಕೃತಕ ರೈಲ್ವೆ ಅಪಘಾತದ ದೃಶ್ಯಾವಳಿಯನ್ನು ಸೃಷ್ಟಿಸಲಾಯಿತು. ಈ ದುರಂತದಲ್ಲಿ ಪ್ರಯಾಣಿಕ ರೈಲಿನ ಎರಡು ಬೋಗಿಗಳು ಉರುಳಿದವು ಮತ್ತು ಸುಮಾರು ಪ್ರಯಾಣಿಕರಿಗೆ ಗಂಭೀರ ಗಾಯಗಳಾದವು ಎಂಬುವುದನ್ನು ಸೃಷ್ಟಿಸಲಾಯಿತು.

ಅಪಘಾತದಲ್ಲಿ ಗಾಯಾಳುಗಳ ನೋವಿನ ಅಕ್ರಂದನ, ಸಾವು ನೋವು ನಡೆದ ಘಟನಾ ಸ್ಥಳಕ್ಕೆ ರಕ್ಷಣಾ ತಂಡ ಧಾವಂತದಿಂದ ಆಗಮಿಸಿ ಬೋಗಿಯ ಕಿಟಕಿ ಸೀಳುವಿಕೆ, ಪ್ಯಾನಲ್ ಮತ್ತು ಮೇಲ್ಛಾವಣಿಯನ್ನು ಕತ್ತರಿಸಿ ಒಳಗೆ ನುಗ್ಗಿ ಗಾಯಗೊಂಡವರನ್ನು ಸುರಕ್ಷಿತವಾಗಿ ಹೊರತೆಗೆದು ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಯಿತು. ಕೆಲವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯಗೊಂಡವರ ವಿವರಗಳನ್ನು ದಾಖಲಿಸಿ ಅವರ ಸಂಬಂಧಿಕರಿಗೆ ಮಾಹಿತಿ ನೀಡುವ ರೈಲ್ವೆ ಸಹಾಯವಾಣಿ ಸ್ಥಾಪಿಲಾಯಿತು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮುಂತಾದ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಈ ಅಣುಕು ಪ್ರದರ್ಶನದಲ್ಲಿ ಪ್ರದರ್ಶಿಸಲಾಯಿತು.

ಈ ತರಹದ ಅಣುಕು ಪ್ರದರ್ಶನ ದುರಂತದ ಸಂದರ್ಭದಲ್ಲಿ ವಿವಿಧ ರಕ್ಷಣಾ ಇಲಾಖೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಲು, ಪೂರ್ವ ಸಿದ್ದತೆಗೆ ಉತ್ತೇಜನ ನೀಡಲು ಸಹಕಾರಿಯಾಗುತ್ತದೆ. ರೈಲ್ವೆ, ಎನ್‌ಡಿಆರ್‌ಎಫ್ ಮತ್ತು ಇತರೆ ಸಹಭಾಗಿ ಸಂಸ್ಥೆಗಳು ತಮ್ಮ ನೈಪುಣ್ಯತೆಯನ್ನು ಮತ್ತು ತಂತ್ರಜ್ಞಾನದ ಪ್ರದರ್ಶನವನ್ನು ಈ ಅಭ್ಯಾಸದಲ್ಲಿ ತೋರಿಸಿದವು.

ಪ್ರಧಾನ ಮುಖ್ಯ ಸುರಕ್ಷಾ ಅಧಿಕಾರಿ ಎಂ. ರಾಮಕೃಷ್ಣ, ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು, ಮುಖ್ಯ ಯಾಂತ್ರಿಕ ಇಂಜಿನಿಯರ ಪಿ. ಬಾಲಸುಂದರಂ, ವಿಭಾಗೀಯ ವ್ಯವಸ್ಥಾಪಕರುಗಳಾದ ಟಿ.ವಿ. ಭೂಷಣ್ ಮತ್ತು ಪ್ರೇಮ್ ಚಂದ್ರ, ಮುಖ್ಯ ವಿಭಾಗೀಯ ಸುರಕ್ಷತಾ ಅಧಿಕಾರಿ ತ್ರಿನೇತ್ರ ಕೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಅಲೋಕ್ ಕುಮಾರ್ ಹಾಗು ಇತರೆ ವಿಭಾಗೀಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.