ಬಮುಲ್ ಚುನಾವಣೆ- ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್ ಅನರ್ಹ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿ-ಬಿ.ಮುನೇಗೌಡ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಬಮುಲ್ ಚುನಾವಣಾ ಕಣದಲ್ಲಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್ ಅನರ್ಹರೂ, ನ್ಯಾಯಾಲಯವೇ ಅವರನ್ನು ಅವರ ಸ್ಥಾನದಿಂದ ತೆರವು ಮಾಡಲಿದೆ. ರೈತರು ತಮ್ಮ ಮತವನ್ನು ವ್ಯರ್ಥ ಮಾಡಿಕೊಳ್ಳದೆ ಜೆಡಿಎಸ್ ಅಭ್ಯರ್ಥಿಯಾದ ಹುಸ್ಕೂರು ಆನಂದ್ ಅವರಿಗೆ ತಮ್ಮ ಮತವನ್ನು ನೀಡಬೇಕು ಎಂದು ಜೆಡಿಎಸ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಅವರು ಮನವಿ ಮಾಡಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಇಂದು ನಡೆದ ಪತ್ರಿಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು, ಜೆಡಿಎಸ್ ಪಕ್ಷವು ದೊಡ್ಡಬಳ್ಳಾಪುರದಲ್ಲಿ ಇಲ್ಲವೇ ಇಲ್ಲ, ಜೆಡಿಎಸ್ ಪಕ್ಷದಿಂದ ಸೂಕ್ತ ಅಭ್ಯರ್ಥಿಯೂ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ, ಅದೆಲ್ಲ ಸುಳ್ಳು, ಜೆಡಿಎಸ್ನಿಂದ ಪಕ್ಷದ ಅಭ್ಯರ್ಥಿಯಾಗಿ ಹುಸ್ಕೂರು ಆನಂದ್ ಅವರನ್ನು ನಾಯಕರೆಲ್ಲಾ ಸೇರಿ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ ಎಂದರು.
ಈಗಾಗಲೇ ಬಿಜೆಪಿ ಮುಖಂಡರು ಜೆಡಿಎಸ್ನ ಆನಂದ್ ಅವರಿಗೆ ಇನ್ನಿಲ್ಲದ ತೊಂದರೆಯನ್ನು ಕೊಟ್ಟಿದ್ದಾರೆ. ಅದು ಇಡೀ ತಾಲೂಕಿನ ಜನತೆಯೂ ಗಮನಿಸಿಯೂ ಇದ್ದಾರೆ. ಈ ಹಿಂದೆ ಅಪ್ಪಯ್ಯಣ್ಣನವರು ಬಮೂಲ್ ಚುನಾವಣೆಯಲ್ಲಿ ನೋವು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಸಿ ಆನಂದ್ ಅವರಿಗೆ ಮತನೀಡಿ ನಿಮ್ಮ ಮತ ವ್ಯರ್ಥ ಮಾಡಿಕೊಳ್ಳಬೇಡಿ, ಜೆಡಿಎಸ್ಗೆ ಮತ ನೀಡಿ ಎಂದರು.
ಜೆಡಿಎಸ್ ಮುಖಂಡ ಹರೀಶ್ ಗೌಡ ಮಾತನಾಡಿ, ಬಮುಲ್ ಚುನಾಣೆಗೆ ಜೆಡಿಎಸ್ನಿಂದ ಮೂವರು ಅಭ್ಯರ್ಥಿಗಳು ಕಣದಲ್ಲಿದ್ದರು ಈ ಪೈಕಿ ಇಬ್ಬರು ಕಣದಿಂದ ಹಿಂದೆ ಸರಿದು ಹುಸ್ಕೂರು ಆನಂದ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ, ಇನ್ನು ಚುನಾಣೆಗೆ ಉಳಿದಿರುವುದು ಕೇಲವ 92 ಗಂಟೆಗಳು ಮಾತ್ರ, ಸಾಕಷ್ಟು ಕೆಲಸ ಮಾಡಬೇಕಾಗಿದೆ. ರೈತಾಪಿ ವರ್ಗದವರು ಹೆಚ್ಚಿನ ಮತ ನೀಡಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.
ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಹುಸ್ಕೂರ್ ಆನಂದ್ ಮಾತನಾಡಿ, ಕೆಲವರು ಬೇಕಂತಲೇ ನನ್ನ ಮೇಲೆ 8 ಕೇಸ್ ಹಾಕಿ ಕಿರುಕುಳ ಕೊಟ್ಟಿದ್ದಾರೆ. ಸ್ಪರ್ಧೆ ಮಾಡಲು ಕೋರ್ಟ್ ನಿಂದ ಆದೇಶ ತಂದಿದ್ದೇನೆ. ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡರು, ಮುಖಂಡರು, ಕಾರ್ಯಕರ್ತರು ನೀವೇ ಸೂಕ್ತ ಹಾಗೂ ಉತ್ತಮ ಅಭ್ಯರ್ಥಿ ಎಂದು ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರ ನಿರ್ಧಾರಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
ನನ್ನ ಗೆಲುವಿಗೆ ಎಲ್ಲರು ಸಹಕರಿಸಬೇಕು. ಅಧಿಕಾರಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ದೊಡ್ಡಬಳ್ಳಾಪುರವನ್ನು ಮಾದರಿಯನ್ನಾಗಿಸುತ್ತೇನೆ ಎಂದರು.
ಈ ವೇಳೆ ಎ.ನರಸಿಂಹಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ವಿಜಯಕುಮಾರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ ನಗರ ಮಹಿಳಾ ಘಟಕದ ಅಧ್ಯಕ್ಷೆ ಶಾಂತಮ್ಮ ಬೆಂ.ಗ್ರಾ ಮಹಿಳಾ ವಕ್ತಾರೆ ಶಶಿಕಲಾ, ಹೋಬಳಿ ಅಧ್ಯಕ್ಷರಾದ ಜಗನ್ನಾಥ ಚಾರಿ, ರಂಗಸ್ವಾಮಿ, ಸತೀಶ್, ಸಿದ್ದಪ್ಪ, ರಾಜಗೋಪಾಲ್, ಜಗದೀಶ, ಅಶ್ವತ್ಥನಾರಾಯಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು..