ದೊಡ್ಡಬಳ್ಳಾಪುರ: ಕೆರೆಗಳ ಉಳಿವಿಗಾಗಿ ಮತ್ತು ಶುದ್ದ ಕುಡಿಯುವ ನೀರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ತಮ್ಮ ಗ್ರಾಮದ ಕೆರೆಗಳ ಉಳಿವಿಗಾಗಿ ಮತ್ತು ಗ್ರಾಮಸ್ಥರ ಮನವಿಗೆ ಸ್ಪಂದಿಸದ ಅಧಿಕಾರಿಗಳ ನಡೆ ಖಂಡಿಸಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನವಾದ (ಏ.14) ಇಂದು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಉಪವಾಸ್ಯ ಸತ್ಯಾಗ್ರಹವನ್ನು ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಸದಸ್ಯರು ನಡೆಸಿದರು.
ತಾಲ್ಲೂಕಿನ ದೊಡ್ಡತುಮಕೂರು ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಕೆರೆಗಳಿಗೆ ನಗರದ ಹೊರವಲಯದಲ್ಲಿರುವ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಕೆಮಿಕಲ್ ಮಿಶ್ರಿತ ತ್ಯಾಜ್ಯ ಮತ್ತು ದೊಡ್ಡಬಳ್ಳಾಪುರ ನಗರದ ಒಳಚರಂಡಿ ನೀರನ್ನು ಸಂಸ್ಕರಣೆ ಮಾಡದೇ ನೇರವಾಗಿ ಕೆರೆಗೆ ಹರಿಸುವ ಮೂಲಕ ಪಂಚಾಯ್ತಿ ವ್ಯಾಪ್ತಿಯ ಗ್ರಾಮದ ಜನರಿಗೆ ಜೀವ ಜಲವಾಗಿದ್ದ ಕೆರೆಯನ್ನು ಈಗಾಗಲೇ ಸಂಪೂರ್ಣ ಕಲುಷಿತಗೊಳಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು, ಗ್ರಾಮಸ್ಥರಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಕೆರೆ ಹೋರಾಟಗಾರರು ಆಗ್ರಹಿಸಿದರು.
ಉಪವಾಸ ಕೈಬಿಡಿ ಎಂದ ಅಧಿಕಾರಿಗಳು:
ಕೆರೆಗಳ ಉಳಿವಿಗಾಗಿ ಮತ್ತು ಗ್ರಾಮದ ಪ್ರತಿ ಮನೆಗೂ ಶಾಶ್ವತ ಕುಡಿಯುವ ನೀರು ಕಲ್ಪಿಸುವಂತೆ ಒತ್ತಾಯಿಸಿ ಇಂದು ಕೆರೆ ಸಂರಕ್ಷಣಾ ವೇದಿಕೆ ಸದಸ್ಯರು ಮೂರನೇ ಹಂತದ ಉಪವಾಸ ಸತ್ಯಾಗ್ರಹವನ್ನು ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ನಡೆಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ದೊಡ್ಡಬಳ್ಳಾಪುರ ತಹಶಿಲ್ದಾರ್ ವಿಭಾ ವಿದ್ಯಾ ರಾಥೋಡ್ ಮತ್ತು ಉಪವಿಭಾಗಾಧಿಗಳು ಮಾತನಾಡಿ, ಈಗಾಗಲೇ ಇದೇ ವಿಚಾರವಾಗಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಲು ಎಲ್ಲಾ ರೀತಿಯಿಂದಲೂ ಕೆಲಸ ಮಾಡುತ್ತಿದ್ದೇವೆ ಆದ್ದರಿಂದ ಈ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿಕೊಂಡರು.


ಶಾಸಕರಿಂದ ಭರವಸೆ:
ಇನ್ನು, ಸತ್ಯಾಗ್ರಹ ನಿರತರನ್ನು ಭೇಟಿ ಮಾಡಿದ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಅವರು, ಈಗಾಗಲೇ ಕೆರೆಗಳ ಬಗ್ಗೆ ಶಾಸನ ಸಭೆಯಲ್ಲಿ ಮಾತನಾಡಿ ರೈತರ ಸಮಸ್ಯೆಗಳ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಗಮನಕ್ಕೆ ತಂದಿದ್ದೇನೆ, ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ಕಾವೇರಿ ನೀರು ತರುವ ಬಗ್ಗೆ ಶಾಸನ ಸಭೆಯಲ್ಲಿ ಗಮನ ಸೆಳೆಯಲಾಗುವುದು ಎಂದು ಹೋರಾಟಗಾರರಿಗೆ ಭರವಸೆ ನೀಡಿದರು.


ಮಳೆ ನೀರು ಕೋಯ್ಲಿಗೆ ರೈತರ ಆಗ್ರಹ:
ಈಗಾಗಲೇ ಬಾಶೆಟ್ಟಿಹಳ್ಳಿ ಕಾರ್ಖಾನೆಗಳು ತಮ್ಮ ಕೆಮಿಕಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡದೇ ನೇರವಾಗಿ ಕೆರೆಗೆ ಮತ್ತು ಭೂಗರ್ಭಕ್ಕೆ ಬಿಡುತ್ತಿರುವುದರಿಂದ ಅಂತರ್ಜಲದ ಗುಣಮಟ್ಟ ಸಂಪೂರ್ಣ ಕುಸಿದಿದೆ. ಈ ಹಿನ್ನೆಲೆ ಅಟಲ್ ಭೂ ಜಲ ಯೋಜನೆ ಅಡಿಯಲ್ಲಿ ಮಳೆ ನೀರನ್ನು ಹಿಡಿದಿಟ್ಟು ಸಂರಕ್ಷಣೆ ಮಾಡಿ ಶುದ್ದೀಕರಣಗೊಳಿಸುವ ಮೂಲಕ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಮನೆಗಳಿಗೂ ಶುದ್ದ ಕುಡಿಯುವ ನೀರನ್ನು ಪೂರೈಸಬೇಕು. ಈ ಯೋಜನೆಯನ್ನು ಯಾವುದೇ ಅಡೆತಡೆ ಇಲ್ಲದೇ ನಿಸ್ಪಕ್ಷಪಾತವಾಗಿ ರಾಜಕಾರಣಿಗಳು, ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರ ಆಗ್ರಹಿಸಿದರು.
ಈ ಉಪವಾಸ ಸತ್ಯಾಗ್ರಹದಲ್ಲಿ ದೊಡ್ಡ ತುಮಕೂರು ಗ್ರಾಮದ ವಿಜಯ್ ಕುಮಾರ್, ಮುನಿಕೃಷ್ಣ, ಚನ್ನಕೇಶವ, ರಮೇಶ್, ಸತೀಶ್, ಮೂರ್ತಿ, ದೊಂಬರಹಳ್ಳಿ ವಿಜಯ್ ಕುಮಾರ್, ವಸಂತ್ ಕುಮಾರ್, ಮಂಜುನಾಥ್ ಸೇರಿದಂತೆ ಅರ್ಕಾವತಿ ನದಿಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆಯ ಸದಸ್ಯರು ಭಾಗವಹಿಸಿದ್ದರು.