Doddaballapura: ಏ.14ರಂದು ಸಂವಿಧಾನ ಉಳಿಸಿ ಕಾನೂನು ರಕ್ಷಣೆಗಾಗಿ ಉಪವಾಸ ಸತ್ಯಾಗ್ರಹ
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಏ.14ರ ಅಂಬೇಡ್ಕರ್ ಜಯಂತಿಯಂದು ತಾಲ್ಲೂಕು ಕಚೇರಿ ಮುಂದೆ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಸದಸ್ಯರು ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಮುಖಂಡರು, ದೊಡ್ಡತುಮಕೂರು ಗ್ರಾಮ ಪಂಚಾಯಿತಿ ಹಾಗೂ ಮಜಾರಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಗ್ರಾಮಗಳ ಕೆರೆಗಳಿಗೆ ಕಲುಷಿತ ನೀರು ಹರಿದು ಅಂತರ್ಜಲ ಕಲುಷಿತವಾಗಿದೆ. ಕಾರ್ಖಾನೆಗಳ ಕೊಳಚೆ ನೀರು ಹರಿಸುತ್ತಿರುವ ದಾಖಲೆ ಕೊಟ್ಟರೂ ಕ್ರಮ ವಹಿಸುತ್ತಿಲ್ಲ. ಹಾಗಾಗಿ ಸರ್ಕಾರವನ್ನು ಎಚ್ಚರಿಸಲು ಈ ಸತ್ಯಾಗ್ರಹ ಎಂದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ರಾಸಾಯನಿಕ ಘನ ತ್ಯಾಜ್ಯ ನೀರು, ದೊಡ್ಡಬಳ್ಳಾಪುರ ನಗರಸಭೆ ಹಾಗೂ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ಘನ ತ್ಯಾಜ್ಯ ನೀರು ತಾಲ್ಲೂಕಿನ ದೊಡ್ಡತುಮಕೂರು ಹಾಗೂ ಮಜಾರಹೊಸಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಅಂತ್ರಜಲ ಸಂಪೂರ್ಣ ಹಾಳಾಗಿದ್ದು ಪ್ರಸ್ತುತ ನಮ್ಮ ಭಾಗದಲ್ಲಿ ಅನೇಕ ಜನರು ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಕಿಡ್ನಿ ಸೇರಿದಂತೆ ಹಲವು ಅಂಗಾಂಗ ವೈಫಲ್ಯಗಳಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಹೋರಾಟ ಹಲವು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿದ್ದರು ಯಾವುದೇ ಪ್ರಯೋಜನವಾಗಿಲ್ಲ ಹಾಗಾಗಿ ಏಪ್ರಿಲ್ 14 ರಂದು ಸಾಂಕೇತಿಕ ಹೋರಾಟ ಉಪವಾಸ ಸತ್ಯಗ್ರಹ ನೆಡೆಸುತ್ತಿದ್ದೇವೆ ಎಂದು ರೈತ ಮುಖಂಡ ವಸಂತ್ ಕುಮಾರ್ ತಿಳಿಸಿದರು.
ಈ ವೇಳೆ ಅರ್ಕಾವತಿ ನದಿ ಹೋರಾಟ ಸಮಿತಿಯ ವಸಂತಕುಮಾರ್, ಸತೀಶ್ ಕುಮಾರ್, ರಮೇಶ್, ಮುನಿಕೃಷ್ಣ, ನರಸಿಂಹಮೂರ್ತಿ, ಕಾಳೇಗೌಡ, ವಿಜಯ್ ಕುಮಾರ್, ಗೋಪಾಲ ಕೃಷ್ಣ, ರಮೇಶ, ನಾರಾಯಣಸ್ವಾಮಿ ಇತರರು ಇದ್ದರು.