ದೊಡ್ಡಬಳ್ಳಾಪುರ: ಛಲವಾದಿ ಮಹಾಸಭಾದ ತಾಲ್ಲೂಕು ನೂತನ ಅಧ್ಯಕ್ಷರಾಗಿ ಸೊಣ್ಣಪ್ಪನಹಳ್ಳಿ ರಮೇಶ್ ನೇಮಕ

ಜಿಲ್ಲಾ ಸುದ್ದಿ

ರಾಘವೇಂದ್ರ ಹೆಚ್.ಎ

6/26/20251 min read

ದೊಡ್ಡಬಳ್ಳಾಪುರ: ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷರಾದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಅವರು ಸೊಣ್ಣಪ್ಪನಹಳ್ಳಿ ರಮೇಶ್ ಅವರನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಪತ್ರವನ್ನು ನೀಡಿದ್ದಾರೆ ಎಂದು ಛಲವಾದಿ ಮುಖಂಡರಾದ ಗೂಳ್ಯ ಹನುಮಣ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿ ಮಾಹಿತಿ ನೀಡಿದರು.

ಕಳೆದ ಹಲವು ವರ್ಷಗಳಿಂದ ಸಮುದಾಯದ ಕೆಲಸಗಳನ್ನು ನಾವು ಮಾಡಿಕೊಂಡು ಬರುತ್ತಿದ್ದೇವೆ, ನಮ್ಮ ಸೇವೆಯನ್ನು ಗುರುತಿಸಿ ತಮ್ಮ ಕಚೇರಿಗೆ ಕರೆಸಿಕೊಂಡ ಸಿದ್ದಯ್ಯನವರು ಕಳೆದ ಕೆಲ ವರ್ಷಗಳಿಂದ ತಾಲ್ಲೂಕಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಮಾಹಿತಿ ಪಡೆದು ಮುಂದಿನ ದಿನಗಳಲ್ಲಿ ಸಮುದಾಯದ ಅಭಿವೃದ್ದಿಗಾಗಿ ಸೊಣ್ಣಪ್ಪನಹಳ್ಳಿ ರಮೇಶ್ ಅವರನ್ನು ತಾಲ್ಲೂಕು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದರು.

ಛಲವಾದಿ ಹಿರಿಯ ಮುಖಂಡರಾದ ಮರಿಯಪ್ಪನವರು ಮಾತನಾಡಿ, ನಮ್ಮ ಸಮುದಾಯಕ್ಕೆ ಮತ್ತಷ್ಟು ಬಲ ತುಂಬಲು, ಸಮುದಾಯದ ಅಭಿವೃದ್ದಿಗಾಗಿ ತಾಲ್ಲೂಕಿನಲ್ಲಿ ಕೆಲಸ ಮಾಡಲೆಂದು ರಾಜ್ಯಾಧ್ಯಕ್ಷರಾದ ಸಿದ್ದಯ್ಯನವರು ದೊಡ್ಡಬಳ್ಳಾಪುರ ತಾಲ್ಲೂಕಿಗೆ ನೂತನ ಅಧ್ಯಕ್ಷರನ್ನಾಗಿ ಸೊಣ್ಣಪ್ಪನಹಳ್ಳಿ ರಮೇಶ್ ಅವರನ್ನ ನೇಮಕ ಮಾಡಿ ಆದೇಶಿಸಿದ್ದಾರೆ. ಸದ್ಯ ಅವರ ಬೆಂಬಲಕ್ಕೆ ನಿಂತು ನಾವು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದರು.

ಬಳಿಕ ಮುಖಂಡರಾದ ಮುನಿರಾಜು ಮಾತನಾಡಿ, ಛಲವಾದಿ ಮಹಾಸಭಾವು ನಮ್ಮ ತಾಲ್ಲೂಕಿನಲ್ಲಿ ಕಳೆದ ೧೫-೨೦ ವರ್ಷಗಳಿಂದ ಉತ್ತಮವಾಗಿ ಸಮುದಾಯದ ಸೇವೆಯನ್ನು ಮಾಡಿಕೊಂಡು ಬಂದಿದೆ. ಇತ್ತೀಚೆಗೆ ತಾಲೂಕಿನ ಕೆಲ ಮುಖಂಡರು ಸಮುದಾಯವನ್ನು ಕಡೆಗಣಿಸಿದ್ದನ್ನು ಮನಗಂಡ ರಾಜ್ಯಮಟ್ಟದ ನಾಯಕರು ಇದೀಗ ಸಮುದಾಯದ ಬೆಳವಣಿಗೆಗಾಗಿ ನೂತನ ಅಧ್ಯಕ್ಷರನ್ನಾಗಿ ರಮೇಶ್ ಅವರನ್ನು ನೇಮಕ ಮಾಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಂಡು ಇನ್ನು ಮುಂದೆ ತಾಲ್ಲೂಕಿನಲ್ಲಿರುವ ಸಮುದಾಯದ ಜನತೆಗೆ ಸರ್ಕಾರದಿಂದ ಸಿಗಬೇಕಾದ ಸೇವೆಗಳನ್ನು ಸಿಗುವಂತೆ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದರು.

ನೂತನ ತಾಲ್ಲೂಕು ಅಧ್ಯಕ್ಷ ಸೊಣ್ಣಪ್ಪನಹಳ್ಳಿ ರಮೇಶ್ ಮಾತನಾಡಿ, ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಛಲವಾದಿ ಕಾರ್ಯಕರ್ತನಾಗಿ ದುಡಿದಿದ್ದೇನೆ. ಇನ್ನು ಮುಂದೆಯೂ ಕೂಡ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರಾಜ್ಯಾಧ್ಯಕ್ಷರು ನನ್ನ ಮೇಲೆ ಇರಿಸಿರುವ ನಂಬಿಕೆಯನ್ನು ಉಳಿಸಿಕೊಂಡು ತಾಲೂಕಿನ ಜನತೆಯ ಸೇವೆಂiÀiನ್ನು ಮಾಡುತ್ತೇನೆ ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ನೂತನ ತಾಲ್ಲೂಕು ಅಧ್ಯಕ್ಷರನ್ನು ಸಮುದಾಯದ ಮುಖಂಡರು ಹಾರ ಹಾಕಿ ಶಾಲು ಹೊದಿಸಿ ಸನ್ಮಾನಿಸಿದರು.

ಸುದ್ದಿಗೋಷ್ಠಿಯಲ್ಲಿ ರಮೇಶ್, ಅಜಯ್ ಕುಮಾರ್, ತಳಗವಾರ ಸತೀಶ್, ಸೇರಿದಂತೆ ಸಮುದಾಯದ ಹಲವು ಮುಖಂಡರು ಉಪಸ್ಥಿತರಿದ್ದರು.