Doddaballapura: 26ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆ ಸಜ್ಜು - ಬಿ.ಎನ್ ಕೃಷ್ಣಪ್ಪ
ಜಿಲ್ಲಾ ಸುದ್ದಿ


ದೊಡ್ಡಬಳ್ಳಾಪುರ: ಇದೇ ಏ.12 ಮತ್ತು 13 (ಶನಿವಾರ ಮತ್ತು ಭಾನುವಾರ)ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲ್ಲೂಕಿನ ಮಧುರೆ ಹೋಬಳಿ ಕನಸವಾಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಸಮ್ಮೇಳನಕ್ಕೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕಸಾಪ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಬಿ.ಎನ್ ಕೃಷ್ಣಪ್ಪ ತಿಳಿಸಿದರು.
ಗುರುವಾರ ನಗರದ ಪ್ರವಾಸಿ ಮಂದಿರಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ಈ ಬಾರಿ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಗೊ.ರೂ ಚನ್ನಬಸಪ್ಪನವರು ಉದ್ಘಾಟಿಸಲಿದ್ದಾರೆ. ಹಿರಿಯ ಛಾಯಾಗ್ರಾಹಕ, ಸಾಕ್ಷ್ಯಚಿತ್ರ ಕಲಾವಿದ ಟಿ.ಕೆಂಪಣ್ಣ ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ ಎಂದರು.
ಬಳಿಕ ಮಾತನಾಡಿ ದೊಡ್ಡಬಳ್ಳಾಪುರ ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಗೋವಿಂದರಾಜು ಅವರು, ಮಧುರೆ ಹೋಬಳಿಯಲ್ಲಿ ಈಗಾಗಲೇ ತಾಲ್ಲೂಕು ಮಟ್ಟದ ಎರಡು ಸಾಹಿತ್ಯ ಸಮ್ಮೇಳನಗಳು ನಡೆದಿದ್ದು ಈ ಬಾರಿ ಜಿಲ್ಲಾ ಮಟ್ಟದ ಸಮ್ಮೇಳನ ನಡೆಯುತ್ತಿರುವುದು ಸಂತಸದ ವಿಷಯ ಎಂದರು.
ಸಮ್ಮೇಳನದ ಮೊದಲನೆ ದಿನವಾದ ಶನಿವಾರ ಬೆಳಗ್ಗೆ 7ಗಂಟೆಗೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ, ನಂತರ ಸಮ್ಮೇಳನಾಧ್ಯಕ್ಷರ ಮೆರವಣಿಗೆ, ಬಳಿಕ ಗೊ.ರೂ ಚನ್ನಬಸಪ್ಪನವರು ಸಮ್ಮೇಳನ ಉದ್ಘಾಟನೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ಮಂದಿ ಕವಿಗಳು ಮತ್ತು ಸಾಹಿತಿಗಳ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ನಂತರ ವಿಚಾರ ಗೋಷ್ಠಿ, ಯುವ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಂಗ ಗೀತೆಗಳು ನಡಯಲಿದೆ.
ಇನ್ನು, ಸಮ್ಮೇಳನದ ಎರಡನೇ ದಿನವಾದ ಭಾನುವಾರ ಬೆಳಗ್ಗೆ 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಂಗ ಗೀತೆಗಳು, ಸಾಹಿತ್ಯ ವಿಮರ್ಶಕರಾದ ಶ್ರೀ.ಎಂ.ಜಿ.ಚಂದ್ರಶೇಖರಯ್ಯ ನವರ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ-2, ಉಪನ್ಯಾಸ, ಮಧ್ಯಾಹ್ನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, ಬಹಿರಂಗ ಅಧಿವೇಶನ, ಕವಿಗೋಷ್ಠಿ, ಸನ್ಮಾನ ಮತ್ತು ಸಮಾರೋಪ ಸಮಾರಂಭ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಇದೇ ವೇಳೆ ಈ ಬಾರಿಯ 26ನೇ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲೆಯ ಎಲ್ಲಾ ತಲ್ಲೂಕುಗಳ ಕನ್ನಡ ಸಾಹಿತ್ಯ ಆಸಕ್ತರು, ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ಕೃಷ್ಣಪ್ಪ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕು ಕಸಾಪ ಅಧ್ಯಕ್ಷರಾದ ಗೋವಿಂದ ರಾಜು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡರು.
ಈ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್, ಕಾರ್ಯದರ್ಶಿ ಅಶ್ವತ್ಥಗೌಡ, ಜಿಲ್ಲಾ ಪ್ರತಿನಿಧಿ ಶರಣಯ್ಯ ಹಿರೇಮಠ, ದೇವನಹಳ್ಳಿ ತಾಲೂಕು ಅಧ್ಯಕ್ಷ ನಂಜೇಗೌಡ, ನೆಲಮಂಗಲ ತಾಲೂಕು ಕಾರ್ಯದರ್ಶಿಗಳಾದ ಸದಾನಂದ ಆರಾಧ್ಯ, ಭಾನುಪ್ರಕಾಶ್, ಮಧುರೆ ಹೋಬಳಿ ಕಾರ್ಯದರ್ಶಿ ಚಂದ್ರಶೇಖರಯ್ಯ, ಕಸಬಾ ಹೋಬಳಿ ಕಾರ್ಯದರ್ಶಿ ಸುರೇಶ್, ತಾಲೂಕು ಘಟಕದ ಪ್ರತಿನಿಧಿ ಸಫೀರ್ ಮತ್ತಿತರರು ಹಾಜರಿದ್ದರು.