ಮುರುಡೇಶ್ವರ ಕ್ಷೇತ್ರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ. ಅರೆಬರೆ ಬಟ್ಟೆ ಧರಿಸಿ ಬಂದವರಿಗೆ ನಿಷೇಧ.

ಜಿಲ್ಲಾ ಸುದ್ದಿ

ಧರ್ಮ ಬಸವನಪುರ.

6/23/20251 min read

ಉತ್ತರಕನ್ನಡ : ಭಟ್ಕಳ ತಾಲೂಕಿನ ಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರ ಶಿವಾಲಯದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ.

ನಿತ್ಯ ಸಾವಿರಾರು ಭಕ್ತರು ಆಗಮಿಸುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮುರುಡೇಶ್ವರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಜರಿಗೊಳಿಸಲಾಗಿದೆ.

ಇಲ್ಲಿಗೆ ಬರುವ ಪ್ರವಾಸಿಗರು ಕಡಲ ತೀರಕ್ಕೆ ಭೇಟಿ ನೀಡಿದ ನಂತರ ಶಿವನ ದೇವಾಲಯಕ್ಕೂ ಭೇಟಿ ಕೊಡುತ್ತಾರೆ. ಈ ವೇಳೆ ಪುರುಷರು ಚಡ್ಡಿ, ಬನಿಯನ್‌ನಲ್ಲಿ ಬಂದರೆ, ಮಹಿಳೆಯರು ಸಹ ಧಾರ್ಮಿಕ ಸ್ಥಳದಲ್ಲಿ ಧರಿಸಬೇಕಾದ ವಸ್ತ್ರ ಧರಿಸದೇ ಆಕ್ಷೇಪಾರ್ಹ ರೀತಿಯಲ್ಲಿ ದೇವರ ದರ್ಶನಕ್ಕೆ ಬರುತಿದ್ದರು. ಆಸ್ತಿಕ ಭಕ್ತರು ಈ ಬಗ್ಗೆ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿ ತರುವಂತೆ ಮನವಿ ಮಾಡಿದ್ದರು.

ಈಗ ಆಡಳಿತ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಪುರುಷರಿಗೆ ಪಂಚೆ ಮತ್ತು ಮಹಿಳೆಯರಿಗೆ ಸೀರೆ, ಚೂಡಿದಾರ ಧರಿಸಿದರೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಿದೆ. ದೇವಾಲಯದ ಎದುರುಭಾಗ ಸೂಚನ ಫಲಕ ಹಾಕಲಾಗಿದ್ದು, ಯಾವ ವಸ್ತ್ರ ಧರಿಸಬೇಕು ಎಂದು ಫಲಕದಲ್ಲಿ ನಮೂದಿಸಲಾಗಿದೆ. ಈ ದೇವಸ್ಥಾನ ಖಾಸಗಿ ಆಡಳಿತ ಮಂಡಳಿ ಹೊಂದಿದ್ದು, ಉದ್ಯಮಿ ಆರ್.ಎನ್.ಶೆಟ್ಟಿ ಅವರ ಕುಟುಂಬ ಈ ದೇವಸ್ಥಾನದ ನಿರ್ವಹಣೆ ಮಾಡುತ್ತಿದೆ