ಡ್ರಗ್ಸ್ ಫ್ಯಾಕ್ಟರಿ ಪ್ರಕರಣ: ಮೂವರು ಪೊಲೀಸ್ ಅಧಿಕಾರಿಗಳು ಸಸ್ಪೆಂಡ್‌

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

12/29/20251 min read

ಬೆಂಗಳೂರು:- ಮಹಾರಾಷ್ಟ್ರದ ANTF ಅಧಿಕಾರಿಗಳು ಬೆಂಗಳೂರಿನಲ್ಲಿ ನಡೆಸಿದ ಡ್ರಗ್ ಫ್ಯಾಕ್ಟರಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಮೂರು ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್‌ಗಳನ್ನು ಅಮಾನತು ಮಾಡಲಾಗಿದೆ.

ಬಾಗಲೂರು, ಕೊತ್ತನೂರು ಹಾಗೂ ಆವಲಹಳ್ಳಿ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್‌ಗಳಾದ ಶಬರೀಶ್ (ಬಾಗಲೂರು), ಚೇತನ್ (ಕೊತ್ತನೂರು) ಮತ್ತು ರಾಮಕೃಷ್ಣ ರೆಡ್ಡಿ (ಅವಲಹಳ್ಳಿ) ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಈ ಕುರಿತು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.ಡ್ರಗ್ ಜಾಲದ ವಿರುದ್ಧ ಸಮರ್ಪಕ ಕ್ರಮ ಕೈಗೊಳ್ಳಲು ವಿಫಲವಾದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.

ಬೆಂಗಳೂರು ಉತ್ತರ ಜಿಲ್ಲೆ ಬಾಗಲೂರಿನ ಸ್ಪಂದನಾ ಲೇಔಟ್, ಕೊತ್ತನೂರಿನ ಎನ್.ಜಿ. ಗೊಲ್ಲಹಳ್ಳಿ, ಆವಲಹಳ್ಳಿ ಠಾಣಾ ವ್ಯಾಪ್ತಿಯ ಯಾರಪ್ಪನಹಳ್ಳಿಯಲ್ಲಿಯಲ್ಲಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿ 55.88 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು, ಫ್ಯಾಕ್ಟರಿ ಪತ್ತೆ ಹಚ್ಚಿದ್ದರು. ನಾಲ್ವರನ್ನು ಬಂಧಿಸಲಾಗಿದೆ.

ಬಾಗಲೂರು, ಕೊತ್ತನೂರು, ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜನವಸತಿ ಪ್ರದೇಶಗಳಲ್ಲಿ ಅನೇಕ ತಿಂಗಳಿನಿಂದ ಈ ಡ್ರಗ್ಸ್ ಫ್ಯಾಕ್ಟರಿಗಳು ಕಾರ್ಯ ನಿರ್ವಹಿಸುತ್ತಿದ್ದರೂ ಸ್ಥಳೀಯ ಪೊಲೀಸರ ಗಮನಕ್ಕೆ ಡ್ರಗ್ಸ್ ಫ್ಯಾಕ್ಟರಿ ಬಗ್ಗೆ ಗಮನಕ್ಕೆ ಬಾರದಿರುವುದು ಚರ್ಚೆಗೆ ಕಾರಣವಾಗಿತ್ತು.

ದಾಳಿ ವೇಳೆ ಪೊಲೀಸರು 4.1 ಕೆಜಿ ಘನ (Solid) MDMA ಮತ್ತು 17 ಕೆಜಿ ದ್ರವ (Liquid) MDMA ಸೇರಿ ಒಟ್ಟು 21.4 ಕೆಜಿ ಸಿಂಥೆಟಿಕ್ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದ್ದಾರೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ 55.88 ಕೋಟಿ ರೂ. ಎಂದು ತಿಳಿದುಬಂದಿದೆ. ಜೊತೆಗೆ ಡ್ರಗ್ಸ್ ತಯಾರಿಕೆಗೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳು, ರಾಸಾಯನಿಕ ಪದಾರ್ಥಗಳು ಮತ್ತು ಇತರೆ ಸಾಮಗ್ರಿಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್ ಮತ್ತು ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ತನಿಖೆಯಲ್ಲಿ ರಾಜಸ್ಥಾನ ಮೂಲದ ಯೋಗಿರಾಜ್ ಕುಮಾರ್ ಮತ್ತು ನಯನ್ ಪವರ್ ಎಂಬವರು ಈ ಡ್ರಗ್ಸ್ ಜಾಲದ ಪ್ರಮುಖ ಕಿಂಗ್‌ಪಿನ್‌ಗಳು ಎಂಬ ಮಾಹಿತಿ ಲಭ್ಯವಾಗಿದೆ. ಇವರು ಕೇವಲ ಬೆಂಗಳೂರಲ್ಲಷ್ಟೇ ಅಲ್ಲದೆ, ದೇಶದ ಹಲವು ರಾಜ್ಯಗಳಲ್ಲಿ ಡ್ರಗ್ಸ್ ಫ್ಯಾಕ್ಟರಿಗಳನ್ನು ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಪತ್ತೆಯಾದ ಈ ಫ್ಯಾಕ್ಟರಿಗಳಿಂದ ಮಹಾರಾಷ್ಟ್ರ, ಗೋವಾ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆ ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಡ್ರಗ್ಸ್ ಜಾಲದ ಇನ್ನಷ್ಟು ಕೊಂಡಿಗಳನ್ನು ಪತ್ತೆಹಚ್ಚಲು ಶೋಧ ಕಾರ್ಯ ಮುಂದುವರಿಸಿದ್ದಾರೆ.