ಛಲವಾದಿ ಸಚಿವರ ಸಂಸ್ಥೆಗಳ ಮೇಲೆ ED, CBI ದಾಳಿ, ಕೇಂದ್ರ ಸರ್ಕಾದ ವಿರುದ್ದ ಕಾಂಗ್ರೆಸ್​ ಕಿಡಿ

ಸ್ಥಳೀಯ ಸುದ್ದಿ

ರಾಘವೇಂದ್ರ ಹೆಚ್.ಎ

5/30/20251 min read

ದೊಡ್ಡಬಳ್ಳಾಪುರ: ಬಿಜೆಪಿ ಪಕ್ಷದವರು ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯದ ಮುಖಂಡನ್ನು ಗುರಿಯಾಗಿಸಿಕೊಂಡು ಇಡಿ, ಸಿಬಿಐ ದಾಳಿ ನಡೆಸುತ್ತಿರುವುದು ಖಂಡನೀಯ ಇದನ್ನು ಎಸ್​ಸ್ಸಿ ಎಸ್ಟಿ ಕಾಂಗ್ರೆಸ್​ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಕೆಪಿಸಿಸಿ ಸದಸ್ಯರು ಹಾಗು ದಲಿತ ಮುಖಂಡರಾದ ಜಿ.ಲಕ್ಷ್ಮಿಪತಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ ಹಾಗೂ ಬ್ಲಾಕ್​ ಮಟ್ಟದ ಎಸ್​ಸಿ ಎಸ್​ಟಿ ಘಟಕದ ಅಧ್ಯಕ್ಷರಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.

ಸಿಬಿಐ, ಐಟಿ, ಇಡಿ ಸೇರಿದಂತೆ ಇತರೇ ಇಲಾಖೆಗಳನ್ನು ಬಳಸಿ ಪ್ರಭಾವಿ ದಲಿತ ನಾಯಕರ ಮನೆ ಮೇಲೆ ದಾಳಿ ಮಾಡಿಸಿ ಅವರನ್ನು ಕುಂದಿಸುವ ಕೆಲಸ ನಿರಂತವಾಗಿ ನಡೆಯುತ್ತಿದೆ. ಇದನ್ನು ಖಂಡಿಸಿ ರಾಜ್ಯದೆಲ್ಲಡೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ದ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕಸಬಾ ಎಸ್​ಸಿ ಎಸ್ಟಿ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಕೆಂಪಣ್ಣ ಮಾತನಾಡಿ, ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆಯವರನ್ನು ನಾಯಿಗೆ ಹೋಲಿಸಿರುವುದು ಸರಿಯಲ್ಲ, ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ, ಅವರ ಕುಟುಂಬದೊಂದಿಗೆ ಇದ್ದು, ಬೆಳೆದು ಇದೀಗ ಮನುವಾದಿ ಪಕ್ಷಗಳೊಂದಿಗೆ ಸೇರಿ ಅವರ ತಾಳಕ್ಕೆ ತಕ್ಕಂತೆ ಕುಣಿದು ನಾಯಿಗೆ ಹೋಲಿಕೆ ಮಾಡಿರುವುದು ಖಂಡನೀಯ, ಅವರು ಕೂಡಲೆ ಕ್ಷಮೆ ಕೋರಬೇಕು, ನಮ್ಮ ಸಮುದಾಯದ ಮುಖಂಡರು ತಿದ್ದುಕೊಂಡು ರಾಜಕಾರಣದಲ್ಲಿ ಮುಂದುವರೆಯಬೇಕು ಎಂದು ಎಂದರು.

ಬಿಜೆಪಿಯವರನ್ನು ಮೆಚ್ಚಿಸುವ ಒಂದೇ ಕಾರಣಕ್ಕೆ ಕಾಂಗ್ರೆಸ್ ಮುಖಂಡರಾದ ಪ್ರಿಕಾಂಕ್ ಖರ್ಗೆಯವರನ್ನು ನಾಯಿಗೆ ಹೋಲಿಕೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದನೇ ಮಾಡಿರುವುದು ಖಂಡನೀಯ, ಈ ಕೂಡಲೇ ಛಲವಾದಿ ನಾರಾಯಣಸ್ವಾಮಿ ಕ್ಷಮೆ ಕೋರಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ನಗರ ಎಸ್​ಸಿ ಎಸ್ಟಿ ಘಟಕದ ಅಧ್ಯಕ್ಷರಾದ ಮುನಿರಾಜ್​ ಅವರು ಎಚ್ಚರಿಕೆ ನೀಡಿದರು.

ಪರಿಶಿಷ್ಟ ಜನಾಂಗದ ರಾಜ್ಯ ಸಚಿವರಾದ ಪ್ರಿಯಾಂಕ್ ಖರ್ಗೆಯವರ ವಿರುದ್ದ ಅದೇ ಸಮುದಾಯದವರಾದ ಛಲವಾದಿ ನಾರಾಯಣಸ್ವಾಮಿ ಆಕ್ಷೇಪಾರ್ಹ ಪದಬಳಕೆ ಮಾಡಿ ಬಿಜೆಪಿಯವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಕುರುಬ ಸಂಘದ ಮುಖಂಡರು ಕೃಷ್ಣ ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು, ರಾಜಕಾರಣದಲ್ಲಿ ಇದುವರೆಗೂ ಕಪ್ಪು ಚುಕ್ಕೆ ಇಲ್ಲದೇ ಬೆಳೆದ ರಾಜಕಾರಣಿ ಗೃಹ ಸಚಿವ ಜಿ.ಪರಮೇಶ್ವರ್ ಅವರ ಒಡೆತನದ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸುತ್ತಿರುವುದುನ್ನು ನಮ್ಮ ಪಕ್ಷ ಖಂಡಿಸುತ್ತದೆ. ಇದೇ ರೀತಿ ಮುಂದುವರೆದರೇ ಮುಂದಿನ ದಿನಗಳಲ್ಲಿ ಬಿಜೆಪಿಗೆ ಬುದ್ದಿ ಕಲಿಸುವ ಕೆಲಸ ಮಾಡಲಾಗುವುದು ಎಂದರು.

ನಗರಸಭಾ ಸದಸ್ಯರಾದ ಶಿವಣ್ಣ ಮಾತನಾಡಿ, ಪ್ರಿಕಾಂಕ್ ಖರ್ಗೆಯವರ ಏಳಿಗೆಯನ್ನು ಸಹಿಸದೇ ಛಲವಾದಿ ನಾರಾಯಣಸ್ವಾಮಿ ನಾಯಿಗೆ ಹೋಲಿಕೆ ಮಾಡಿರುವುದು ಸರಿಯಲ್ಲ. ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಸ್ಥಾನ ಪಡೆದುಕೊಂಡಿರಿವುದು ಪ್ರಿಯಾಂಕ್ ಖರ್ಗೆಯನ್ನ ಟಾರ್ಗೆಟ್ ಮಾಡಿ ಖಂಡಸೋಕೆ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಇದನ್ನು ಕಾಂಗ್ರೆಸ್​ ಪಕ್ಷ ಖಂಡಿಸುತ್ತದೆ ಎಂದರು.

ಈ ವೇಳೆ ತಾಲ್ಲೂಕು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾದ ಭೈರೇಗೌಡ, ನಗರ ಬ್ಲಾಕ್​ ಅಧ್ಯಕ್ಷ ಅಪ್ಪಿ ವೆಂಕಟೇಶ್​, ದಲಿತ ಮುಖಂಡ ಟಿ.ಮಂಜುನಾಥ್​, ಶ್ರೀನಿವಾಸ್​ ಮತ್ತು ಮಂಜುನಾಥ್​ ಉಪಸ್ಥಿತರಿದ್ದರು.