ಸೋನಿಯಾ-ರಾಹುಲ್ ವಿರುದ್ಧ ED ಚಾರ್ಚ್'ಶೀಟ್, ಕೇಂದ್ರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ಮುಂದು!

ದೇಶ/ವಿದೇಶ

ರಾಘವೇಂದ್ರ ಹೆಚ್.ಎ

4/16/20251 min read

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಆರೋಪಪಟ್ಟಿಯನ್ನು ಖಂಡಿಸಿ, ಕಾಂಗ್ರೆಸ್ ಬುಧವಾರ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.

ದೇಶಾದ್ಯಂತ ಇಡಿ ಮತ್ತು ಇತರ ಕೇಂದ್ರ ಸರ್ಕಾರಿ ಸಂಸ್ಥೆಗಳ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ತಿಳಿಸಿದೆ.

ಶಾಸಕರು, ಸಂಸದರು, ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಪಕ್ಷದ ಎಲ್ಲಾ ಹಿರಿಯ ನಾಯಕರು ರಾಜ್ಯ ಮಟ್ಟದ ಪ್ರತಿಭಟನೆಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಜಾರಿ ನಿರ್ದೇಶನಾಲಯದ ಕ್ರಮಗಳನ್ನು ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು, ವಿರೋಧ ಪಕ್ಷದ ವಿರುದ್ಧ ಮೋದಿ-ಶಾ ಆಡಳಿತದ ದ್ವೇಷಕ್ಕೆ ಮಿತಿಯಿಲ್ಲದಂತಾಗಿದೆ. ಜನರ ಕಳವಳಗಳನ್ನು ಪರಿಹರಿಸಲು ವಿಫಲರಾಗಿರುವ ಮತ್ತು ನಿರಂತರವಾಗಿ ಗೊಂದಲದ ಮೇಲೆ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಪ್ರಧಾನಿ ಮತ್ತು ಗೃಹ ಸಚಿವರು, ಈ ಕ್ರಮದ ಮೂಲಕ ಹತಾಶೆಯನ್ನು ತೋರಿಸುತ್ತಿದ್ದಾರೆ. ನಮ್ಮ ನಾಯಕರು ದೇಶಕ್ಕಾಗಿ ತಮ್ಮ ರಕ್ತವನ್ನು ನೀಡಿದ ಕುಟುಂಬಕ್ಕೆ ಸೇರಿದವರು ಎಂಬುದನ್ನು ಕೇಂದ್ರ ಮರೆತಂತಿದ. ಅವರ ಈ ಸಣ್ಣ ತಂತ್ರಗಳು, ಕೇಂದ್ರೀಯ ಸಂಸ್ಥೆಗಳನ್ನು ಬಳಕೆ ಮಾಡುವುದರಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಇದು ಈ ವಿಭಜಕ, ವಿನಾಶಕಾರಿ ಆಡಳಿತದ ವಿರುದ್ಧ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.

"ಕ್ರಮ ಎಂದು ಕರೆಯಲ್ಪಡುವ ಕ್ರಮವು ನಿಯಮಿತ ಕಾನೂನು ಕಾರ್ಯವಿಧಾನವಲ್ಲ. ಇದು ಕಾನೂನಿನ ನಿಯಮದ ವೇಷ ಧರಿಸಿ ರಾಜ್ಯ ಪ್ರಾಯೋಜಿತ ಅಪರಾಧವಾಗಿದೆ. ಪ್ರಜಾಸತ್ತಾತ್ಮಕ ವಿರೋಧವನ್ನು ಮೌನಗೊಳಿಸುವ ಗುರಿಯಾಗಿದೆ. ಕೇಂದ್ರ ಸರ್ಕಾರ ಸೇಡಿನ ರಾಜಕೀಯವನ್ನು ಅನುಸರಿಸುವಲ್ಲಿ ಎಲ್ಲಾ ಮಿತಿಗಳನ್ನು ಮೀರಿದೆ, ಕಾಂಗ್ರೆಸ್ ಪಕ್ಷದ ನಾಯಕತ್ವವನ್ನು ಬೆದರಿಸಲು ಮತ್ತು ಕಿರುಕುಳ ನೀಡಲು ತನಿಖಾ ಸಂಸ್ಥೆಗಳನ್ನು ಅಸ್ತ್ರವಾಗಿಸಿದೆಕೊಂಡಿದೆ ಎಂದು ಕಿಡಿಕಾರಿದ್ದಾರೆ.

ಏನಿದು ಪ್ರಕರಣ?

ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಅಸೋಸಿಯೇಟೆಡ್ ಲಿಮಿಟೆಡ್ ಜರ್ನಲ್ (ಎಜೆಎಲ್) ಒಡೆತನದಲ್ಲಿದೆ. ಎಜೆಎಲ್‌ಗೆ ಎಐಸಿಸಿ ಮೂಲಕ 90 ಕೋಟಿ ರು.ಸಾಲ ನೀಡಲಾಗಿತ್ತು. ಆದರೆ ಅದು ಸಾಲ ಮರುಪಾವತಿ ಮಾಡಿರಲಿಲ್ಲ. ಆದರೆ ಎಜೆಎಲ್ 2000 ಕೋಟಿ ರು. ಆಸ್ತಿ ಹೊಂದಿತ್ತು. ಈ ನಡುವೆ ಎಜೆಎಲ್‌ ಆಸ್ತಿಯನ್ನು ಕಡಿಮೆ ತೋರಿಸಿ, ಕೇವಲ 50 ಲಕ ರು.ಗೆ ಯಂಗ್ ಇಂಡಿಯನ್ ಎಂಬ ಕಂಪನಿಗೆ ಎಜೆಎಲ್ ಅನ್ನು ಮಾರಾಟ ಮಾಡಲಾಗಿತ್ತು.

ಇದರಲ್ಲಿ ಸೋನಿಯಾ, ರಾಹುಲ್ ಒಟ್ಟು ಶೇ.76ರಷ್ಟು ಷೇರು ಹೊಂದಿದ್ದಾರೆ. ಇದು ಎಜೆಎಲ್ ಆಸ್ತಿ ಕಬಳಿಸಲು ನಡೆಸಿದ ಅಕ್ರಮ ಎಂದು ಆರೋಪಿಸಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ 2014ರ ಜೂನ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ದೆಹಲಿಯ ಪಟಿಯಾಲ ಹೌಸ್‌ ನ್ಯಾಯಾಲಯವು ತನಿಖೆ ನಡೆಸುವಂತೆ ಇ.ಡಿ.ಗೆ ಆದೇಶಿಸಿತ್ತು.ಇ.ಡಿ. 2021ರಲ್ಲಿ ತನ್ನ ತನಿಖೆಯನ್ನು ಪ್ರಾರಂಭಿಸಿತು.