ಚುನಾವಣಾ ಆಯೋಗದಿಂದ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ವೇಳಾಪಟ್ಟಿ ಪ್ರಕಟ

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

11/26/20251 min read

ಬೆಂ ಗ್ರಾಮಾಂತರ: ರಾಜ್ಯ ಚುನಾವಣಾ ಆಯೋಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಗೆ ಉಪ ಚುನಾವಣೆ ನಡೆಸಲು ಚುನಾವಣೆ ವೇಳಾಪಟ್ಟಿ ಘೋಷಿಸಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಬಿ ಬಸವರಾಜು ಅವರು ತಿಳಿಸಿದ್ದಾರೆ.

ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪೈಕಿ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸಾರ್ವತ್ರಿಕ ಚುನಾವಣೆ ಘೋಷಿಸಿದ್ದು ಒಟ್ಟು 19 ವಾರ್ಡ್ಗಗಳಿಗೆ ಚುನಾವಣೆ ನಡೆಯಲಿದೆ.

ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಪೈಕಿ ದೊಡ್ಡಬಳ್ಳಾಪುರ ನಗರಸಭೆಗೆ ಉಪ ಚುನಾವಣೆ ಘೋಷಿಸಿದ್ದು ದೊಡ್ಡಬಳ್ಳಾಪುರದ 21 ನೇ ವಾರ್ಡ್ ನ ಹೇಮಾವತಿಪೇಟೆ ವಾರ್ಡ್ ನ ಸದಸ್ಯರ ಮರಣದಿಂದಾಗಿ ತೆರವಾಗಿರುವ ಒಂದು ವಾರ್ಡ್ ಗೆ ಉಪ ಚುನಾವಣೆ ನಡೆಯಲಿದೆ ಎಂದರು.

ಚುನಾವಣೆ ವೇಳಾಪಟ್ಟಿ

ಜಿಲ್ಲಾಧಿಕಾರಿಗಳಿಂದ 2025 ಡಿಸೆಂಬರ್ 02 ಮಂಗಳವಾರ ಅಧಿಸೂಚನೆ ಹೊರಡಿಸಲಾಗುವುದು. ಡಿಸೆಂಬರ್ 09 ಮಂಗಳವಾರ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಡಿಸೆಂಬರ್ 10 ಬುಧವಾರ ರಂದು ನಾಮಪತ್ರಗಳನ್ನು ಪರಿಶೀಲಿಸುವುದು. ಡಿಸೆಂಬರ್ 12 ಶುಕ್ರವಾರ ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಡಿಸೆಂಬರ್ 21 ಭಾನುವಾರ ಮತದಾನ (ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ) ಮತದಾನ ನಡೆಯಲಿದೆ. ಮರು ಮತದಾನ ಇದ್ದಲ್ಲಿ ಡಿಸೆಂಬರ್ 23 ಮಂಗಳವಾರ ರಂದು(ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ) ಮರು ಮತದಾನ ನಡೆಯಲಿದೆ. ಮತ ಎಣಿಕೆಯು ಡಿಸೆಂಬರ್ 24 ಬುಧವಾರದಂದು ಅಯಾ ತಾಲ್ಲೂಕು ಕೇಂದ್ರ ಸ್ಥಳಗಳಲ್ಲಿ (ಬೆಳಿಗ್ಗೆ 8:00 ಗಂಟೆಯಿಂದ) ಎಣಿಕೆ ನಡೆಯಲಿದೆ. ಡಿಸೆಂಬರ್ 24 ರಂದು ಚುನಾವಣೆ ಮುಕ್ತಾಯಗೊಳ್ಳಲಿದೆ.

ಚುನಾವಣಾ ಸಾದಾಚಾರ ಸಂಹಿತೆಯು 2025 ರ ಡಿಸೆಂಬರ್ 02 ರಿಂದ ಡಿಸೆಂಬರ್ 24 ರವರೆಗೆ ಸಾರ್ವತ್ರಿಕ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಉಪ ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡುಗಳ ವ್ಯಾಪ್ತಿಯಲ್ಲಿ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಬಿ ಬಸವರಾಜು ಅವರು ತಿಳಿಸಿದ್ದಾರೆ.