ಕೆ.ಆರ್.ಪುರ: ಉತ್ತಮ ಆರೋಗ್ಯಕ್ಕೆ ಪರಿಸರ ಸಂರಕ್ಷಣೆ ಅವಶ್ಯಕ:ಹಿಟ್ಟಾಚಿ ಮಂಜುನಾಥ್.
ಸ್ಥಳೀಯ ಸುದ್ದಿ


ಕೆ.ಆರ್.ಪುರ: ಪರಿಸರ ಸಂರಕ್ಷಣೆ ಜೊತೆಗೆ ಉತ್ತಮ ಪರಿಸರ ಕಾಯ್ದುಕೊಂಡರೆ ಪ್ರತಿಯೊಬ್ಬರೂ ಆರೋಗ್ಯದಿಂದ ಇರಬಹುದು ಎಂದು ಅಂಬೇಡ್ಕರ್ ನಗರ ಶಾಲೆಯ ಎಸ್.ಡಿ.ಎಂ.ಸಿ ಮುಖ್ಯಸ್ಥರಾದ ಹಿಟ್ಟಾಚಿ ಮಂಜುನಾಥ್ ಅವರು ತಿಳಿಸಿದರು.
ಕ್ಷೇತ್ರದ ರಾಮಮೂರ್ತಿ ನಗರದ ಅಂಬೇಡ್ಕರ್ ನಗರ ಸರ್ಕಾರಿ ಶಾಲೆಯಲ್ಲಿ ಗ್ರೀನ್ ಪುಟ್ ಪ್ರಿಂಟ್ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನದ ಪ್ರಯುಕ್ತ ಶಾಲಾ ಮಕ್ಕಳೊಂದಿಗೆ ಮರ ನೆಡುವ ಅಭಿಯಾನವನ್ನು ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಪರಿಸರ ಇದ್ದರೆ ಕಾಲಕಾಲಕ್ಕೆ ಉತ್ತಮ ಮಳೆ ಆಗುತ್ತದೆ. ಪ್ರಾಣಿ ಪಕ್ಷಿಗಳು ಬದುಕಲು ಕಾಡು ಮುಖ್ಯವಾಗಿರುತ್ತದೆ. ಪರಿಸರ ನಾಶದಿಂದ ಮನುಷ್ಯನಿಗೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಹಲವಾರು ತೊಂದರೆಗಳಾಗುತ್ತವೆ. ಮನುಷ್ಯನ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ವಿಶ್ವ ನಾಯಕರು ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ ಆಚರಿಸುವುದರ ಮೂಲಕ ಜನರು ಪರಿಸರ ರಕ್ಷಣೆಗೆ ಬದ್ಧರಾಗಬೇಕು ಎಂಬ ಆಶಯ ಹೊಂದಿದ್ದಾರೆ ಎಂದರು.
ಮನುಷ್ಯ ತನ್ನ ಬೇಡಿಕೆಗಳ ಈಡೇರಿಕೆಗಾಗಿ ಗಿಡ ಮರಗಳನ್ನು ನಾಶಪಡಿಸುತ್ತಿದ್ದಾನೆ. ಇದರ ಪರಿಣಾಮ ನಮ್ಮ ಮುಂದಿನ ಭವಿಷ್ಯದ ಮಕ್ಕಳಿಗೆ ಹಾನಿಯುಂಟು ಮಾಡುತ್ತದೆ ಹಾಗಾಗಿ ಕೇವಲ ಪರಿಸರ ದಿನಾಚರಣೆಗೆ ಸೀಮಿತವಾಗದೆ ಪರಿಸರ ಉಳಿವಿಗಾಗಿ ಪ್ರತಿ ದಿನ ಎಲ್ಲಾರೂ ಕೈ ಜೋಡಿಸಬೇಕು ಎಂದರು.
ರಸ್ತೆಗಳ ಅಗಲೀಕರಣ, ಕೆರೆಗಳ ಮುಚ್ಚುವಿಕೆ, ಕಾಡಿನ ನಾಶ ಇದೇ ರೀತಿ ಮುಂದುವರೆದರೆ ಪ್ರಾಣಿ ಸಂಕುಲ ಮನುಷ್ಯ ಸಂಕುಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ತಪ್ಪಿಸಬೇಕಾದರೆ ಗಿಡಗಳನ್ನು ನೆಟ್ಟು ಸಂರಕ್ಷಣೆ ಮಾಡುವದು ಅಗತ್ಯವಾಗಿದೆ ಎಂದು ಹೇಳಿದರು.
ಪ್ರತಿದಿನ ಪರಿಸರದ ಕಾಳಜಿ ಗಿಡ ಮರ ಪ್ರಾಣಿ ಪಕ್ಷಿಗಳ ಕುರಿತು ಕಾಳಜಿ ವಹಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು. ಪರಿಸರ ಸಂರಕ್ಷಣೆ ಹಾಗು ಪ್ಲಾಸ್ಟಿಕ್ ಮುಕ್ತ ನಗರ ಮಾಡುವ ಮಹತ್ವದ ಪ್ರಯತ್ನಕ್ಕೆ ಪ್ರತಿಯೊಬ್ಬರು ಸ್ವಯಂ ಪ್ರೇರಣೆಯಿಂದ ಭಾಗಿಯಾಗಬೇಕಾಗಿದೆ. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರು ತಮ್ಮ ಮನೆ ಅಂಗಳ ರಸ್ತೆ ಬದಿಗಳಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಭಾಸ್ಕರನ್, ಗ್ರೀನ್ ಪುಟ್ ಪ್ರಿಂಟ್ ಸಂಸ್ಥೆಯ ಸದಸ್ಯರು,ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾದ ಬಿ.ವಿ.ಭಾರತಿರವರು, ಪ್ರಾಥಮಿಕ ಪಾಠ ಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯ ಲಕ್ಷ್ಮಿ ರವರು, ಎನಹಾಗಾಗಿದ ಸದಸ್ಯರು ದೇವಿಶ್ರೀ ໖໐.. ಕೃಷ್ಣನ್, ಬಿದ್ಯುತ್ ನಾಥ್ ಮತ್ತು ಸ್ನೇಹಾ ಭಾಗೇರಿಯಾ. ಸೇರಿದಂತೆ ಸಹ ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಜರಿದ್ದರು.