ಮೂರನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ, ಸಿಎಂ ಭೇಟಿಗೆ ತೆರಳಿದ ಕೆರೆಗಳ ಸಂರಕ್ಷಣಾ ಹೋರಾಟಗಾರರ ತಂಡ

ಸ್ಥಳೀಯ ಸುದ್ದಿ

1/24/20261 min read

ದೊಡ್ಡಬಳ್ಳಾಪುರ : ಕೆರೆಗಳ ಸಂರಕ್ಷಣೆಗಾಗಿ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಸಮಿತಿ ಹೋರಾಟಗಾರರ ಅಮರಣಾಂತ ಉಪವಾಸ ಸತ್ಯಾಗ್ರಹವು ಇಂದಿಗೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕಳೆದ ಮೂರು ದಿನಗಳಿಂದ ದೊಡ್ಡತುಮಕೂರು ಮತ್ತು ಚಿಕ್ಕತುಮಕೂರು, ಮಜರಾಹೊಸಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು ತಮ್ಮ ಊರಿನ ಕೆರೆಗಳು ಕಲುಷಿತವಾಗುತ್ತಿದ್ದರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿ ಪೊಳ್ಳು ಭರವಸೆಗಳು ನೀಡುತ್ತಾ ಕಾಲಾಹರಣ ಮಾಡುತ್ತಿದ್ದಾರೆಯೇ ಹೊರತು ಯಾರು ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದ ಎಂದು ಹೋರಾಟಗಾರರು ಕಿಡಿಕಾರಿದರು.

ಈ ವೇಳೆ ಮಾತನಾಡಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ವೇದಿಕೆ ಹೋರಾಟಗಾರರು, ಕಳೆದ ನಾಲ್ಕೈದು ವರ್ಷಗಳಿಂದ ನದಿಗಳ ಸಂರಕ್ಷಣೆಗಾಗಿ ಹೋರಾಟ ನಡೆಸುತ್ತಿದ್ದೇವೆ, 3ನೇ ಹಂತದ ಶುದ್ಧೀಕರಣ ಘಟಕ ತೆರೆದು ನೀರು ಸಂಸ್ಕರಣ ಮಾಡುವಂತೆ ಮನವಿ ಮಾಡಿದರು ಕ್ರಮ ಕೈಗೊಂಡಿಲ್ಲ, ಪ್ರತಿಬಾರಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಂದು ಪೊಳ್ಳು ಭರವಸೆಗಳನ್ನು ನೀಡಿ ನಮ್ಮ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಭಾರಿ ಯಾವುದೇ ಕಾರಣಕ್ಕೂ ನಮ್ಮ ಹೋರಾಟವನ್ನು ಹಿಂಪಡೆಯುವ ಮಾತೆ ಇಲ್ಲ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳು ಲಿಖಿತ ರೂಪದಲ್ಲಿ ಹೇಳಿಕೆ ನೀಡುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.

ಗಣರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶನ:

ಮುಖ್ಯಮಂತ್ರಿಗಳು ಕೆರೆಗಳ ಸಂರಕ್ಷಣೆಗೆ ಎಸ್ ಟಿ ಪಿ ಘಟಕ ಮತ್ತು ಮೂರನೇ ಹಂತದ ಶುದ್ದೀಕರಣಕ್ಕೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಗಣರಾಜ್ಯೋತ್ಸವದಂದು ಕಪ್ಪು ಬಾವುಟ ಪ್ರದರ್ಶನ ಮಾಡಿಯೇ ತೀರುತ್ತೇವೆ ಎಂದು ಹೋರಾಟಗಾರರು ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಿಎಂ ಭೇಟಿಗೆ ತೆರಳಿದ ಅರ್ಕಾವತಿ ನದಿ ಪಾತ್ರದ ಕೆರೆಗಳ ಸಂರಕ್ಷಣಾ ಹೋರಾಟಗಾರರು:

ಕೆರೆಗಳ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟದ ನಡುವೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಮಿತಿಯ ಸದಸ್ಯರು ತಂಡ ತೆರಳಿದ್ದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸಭೆ ನಡೆಸಿ ಚರ್ಚೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎನ್ನುವ ಮಾಹಿತಿ ಇದೀಗ ಮೂಲಗಳಿಂದ ತಿಳಿದುಬಂದಿದೆ.