ಲಕ್ಕೇನಹಳ್ಳಿ ಜಲಾಶಯ ನಿರ್ಮಾಣಕ್ಕೆ ಫಲವತ್ತಾದ ಭೂಮಿ ನೀಡಲು ರೈತರ ವಿರೋಧ
ರಾಜ್ಯಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲೇ ಸಾಸಲು ಹೋಬಳಿಯಲ್ಲಿ ಸಮೃದ್ದವಾದ, ಫಲವತ್ತಾದ ಭೂಪ್ರದೇಶವಿದ್ದು ಈ ಭೂಮಿಯನ್ನೇ ಇಲ್ಲಿನ ರೈತರಾದ ನಾವುಗಳು ಅವಲಂಭಿಸಿದ್ದೇವೆ. ಇಂತ ಭೂಮಿಯನ್ನು ಸರ್ಕಾರ ಕಸಿದುಕೊಂಡು ನಮ್ಮನ್ನು ಬೀದಿಪಾಲು ಮಾಡಲು ಹೊರಟಿದೆ ಎಂದು ಲಕ್ಕೇನಹಳ್ಳಿ, ದಾಸರಪಾಳ್ಯ, ಸಿಂಗೇನಹಳ್ಳಿ ಮತ್ತು ಶ್ರೀರಾಮನಹಳ್ಳಿ ಗ್ರಾಮಸ್ಥರು ಮತ್ತು ರೈತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ತಾಲ್ಲೂಕಿನ ಲಕ್ಕೇನಹಳ್ಳಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ರೈತರು ಮತ್ತು ಗ್ರಾಮಸ್ಥರು, ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದರು.
ಎತ್ತಿನಹೊಳೆ ನೀರು ಪೂರೈಸುವ ಜಲಾಶಯ ನಿರ್ಮಾಣಕ್ಕೆ ತಾಲ್ಲೂಕಿನ ಸಾಸಲು ಹೊಬಳಿಯ ಲಕ್ಕೇನಹಳ್ಳಿಯಲ್ಲಿ ಸರ್ಕಾರ ಜಾಗ ಗುರುತಿಸಿದೆ. ವಾರದ ಹಿಂದೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಜಾಗ ಪರಿಶೀಲಿಸಿದ್ದರು. ಸ್ಥಳದಲ್ಲಿಯೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸ್ಥಳೀಯರೊಂದಿಗೆ ನಡೆಸಿದ್ದರು. ಜಲಾಶಯ ನಿರ್ಮಾಣವಾದರೆ ಲಕ್ಕೇನಹಳ್ಳಿ, ದಾಸರಪಾಳ್ಯ, ಸಿಂಗೇನಹಳ್ಳಿ ಮತ್ತು ಶ್ರೀರಾಮನಹಳ್ಳಿ ಮುಳುಗಡೆಯಾಗುತ್ತವೆ. ಹಾಗಾಗಿ ಇಲ್ಲಿ ಜಲಾಶಯ ನಿರ್ಮಾಣ ಬೇಡ ಎಂದು ರೈತರು ಹೇಳಿದರು.
ವೈಜ್ಞಾನಿಕ ವರದಿ ಆಧಾರ ಇಲ್ಲದೆ ಎತ್ತಿನಹೊಳೆ ಯೋಜನೆಯ ನೀರು ಸಂಗ್ರಹಣೆಗೆ ಸರ್ಕಾರ ಮುಂದಾದ ಪರಿಣಾಮ ಜಲಾಶಯ ನಿರ್ಮಾಣಕ್ಕೆ ಮೂರು ಬಾರಿ ಸ್ಥಳ ಬದಲಾವಣೆಯಾಗಿದೆ. ಈಗ ನಮ್ಮ ಅಂಗಳಕ್ಕೆ ಬಂದಿದ್ದಾರೆ. ನಮ್ಮೂರಿನ ಫಲವತ್ತಾದ ಭೂಮಿ, ಮನೆಗಳನ್ನು ಕಸಿದುಕೊಂಡು ಜಲಾಶಯ ನಿರ್ಮಿಸಲು ಅವಕಾಶ ನೀಡುವುದಿಲ್ಲ' ಎಂದು ರೈತರು ಒಕ್ಕೊರಲ ನಿರ್ಧಾರ ಪ್ರಕಟಿಸಿದರು. ಜಲಾಶಯಕ್ಕಾಗಿ ಮುಳುಗಡೆಯಾಗುತ್ತಿರುವ ಭೂಮಿಯಲ್ಲಿ ವಾರ್ಷಿಕ ₹10 ಕೋಟಿ ಅಡಿಕೆ ಬೆಳೆಯಲಾಗುತ್ತಿದೆ. ಇದಲ್ಲದೆ ಹಣ್ಣು, ತರಕಾರಿ, ಆಹಾರಧಾನ್ಯ ಬೆಳೆಯಲಾಗುತ್ತಿದೆ. ಇಂತಹ ಫಲವತ್ತಾದ ಭೂಮಿಯನ್ನು ಕಸಿದುಕೊಂಡು ರೈತರನ್ನು ಒಕ್ಕಲೆಬ್ಬಿಸುವ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಜಲಾಶಯ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಆದರೇ ಜಲಾಶಯ ನಿರ್ಮಾಣಕ್ಕೆ ಫಲವತ್ತಾದ ಭೂಪ್ರದೇಶ ಒತ್ತುವರಿ ಮಾಡಿಕೊಳ್ಳುತ್ತಿರುವುದು ಸರಿಯಲ್ಲ, ಇಲ್ಲಿನ ಬಹುತೇಕ ರೈತರು ಕೃಷಿಯನ್ನೇ ನಂಬಿಕೊಂಡು ಜೀವ ನಡೆಸುತ್ತಿರುವ ಸಣ್ಣ ಹಿಡುವಳಿಯನ್ನು ಹೊಂದಿರುವವರೇ ಆಗಿದ್ದಾರೆ. ಬರಡು ಭೂಮಿ ಇರುವ ಕಡೆಯಲ್ಲಿ ಜಲಾಶಯ ನಿರ್ಮಿಸಲಿ. ಇಲ್ಲಿಯೇ ಜಲಾಶಯ ನಿರ್ಮಿಸಬೇಕು ಎನ್ನುವುದಕ್ಕೆ ಇಲ್ಲಿ ಯಾವುದೇ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸುತ್ತಿಲ್ಲ. ಬದಲಿಗೆ ಎಲ್ಲಿಂದಲೋ ಪೈಪ್ ಮೂಲಕ ತರಲಾಗುತ್ತಿರುವ ನೀರು ಸಂಗ್ರಹ ಮಾಡಲಾಗುತ್ತದೆ. ಇದಕ್ಕೆ ಯಾವ ಸ್ಥಳ. ದಲ್ಲಾದರೂ ಜಲಾಶಯ ನಿರ್ಮಿಸಲು ಅವಕಾಶ ಇದೆ. ಹಾಗಾಗಿ ಬರಡು ಹಾಗೂ ಸರ್ಕಾರಿ ಜಮೀನು ಹೆಚ್ಚಾಗಿ ಇರುವ ಸ್ಥಳದಲ್ಲಿ ಜಲಾಶಯ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಕ್ಷೇತ್ರದ ಶಾಸಕರು ರೈತರ ಪರವಾಗಿ ನಿಲ್ಲಬೇಕು, ಆದರೇ ಮುಳುಗಡೆಯಾಗುವ ಗ್ರಾಮಗಳ ರೈತರಿಗೆ ಬೇರೆಡೆ ಜಮೀನು, ಮನೆಗಳನ್ನು ನಿರ್ಮಿಸಿಕೊಡುವ ಮಾತುಗಳನ್ನು ಹೇಳುತ್ತಿರುವುದು ಖಂಡನೀಯ ಎಂದು ಗ್ರಾಮದ ಪ್ರಮುಖರು ಅಸಮಧಾನ ವ್ಯಕ್ತಪಡಿಸಿದರು.
ಈ ವೇಳೆ ವಕೀಲರಾದ ನರಸಿಂಹೇಗೌಡ, ಲಕ್ಕಪ್ಪ, ಕೆಂಪರಾಜು, ರಾಮಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.