ರಾತ್ರಿ ವೇಳೆ ಮನೆಗಳಿಗೆ ನುಗ್ಗುತ್ತಿದ್ದ ಕಳ್ಳರ ಗ್ಯಾಂಗ್ ಬಂಧನ
ಕ್ರೈಮ್


ದೊಡ್ಡಬಳ್ಳಾಪುರ: ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು ಒಳ ಹೋಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದ ಕಳ್ಳರ ಗ್ಯಾಂಗ್ ಅನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮುಖಕ್ಕೆ ಮಾಸ್ಕ್, ತಲೆಗೆ ಟೋಪಿ, ಕೈಗಳಿಗೆ ಗ್ಲೌಸ್ ಹಾಕಿಕೊಂಡು, ಕದ್ದ ವಸ್ತುಗಳನ್ನು ತುಂಬಿಕೊಳ್ಳಲು ಬೆನ್ನಿಗೆ ಒಂದು ಬ್ಯಾಗ್ ತಗುಲಿಸಿಕೊಂಡು, ಕೈಗಳಲ್ಲಿ ಲಾಂಗ್, ಮಚ್ಚು, ಕಬ್ಬಿಣದ ರಾಡ್, ಕಲ್ಲುಗಳನ್ನು ಹಿಡಿದುಕೊಂಡು ನುಗ್ಗುತ್ತಿದ್ದ ಈ ಗ್ಯಾಂಗ್ ಸಿಸಿಟಿವಿ ಇದ್ದರೂ ರಾಜಾರೋಷವಾಗಿ ಮನೆಗಳಿಗೆ ಕನ್ನ ಹಾಕುತ್ತಿತ್ತು. ಗೇಟ್ ತೆಗೆದು ಕಾಂಪೌಡ್ ಹತ್ತಿ ಕಿಟಕಿಗಳಲ್ಲಿ ಬಗ್ಗಿ ನೋಡಿ ಒಂದು ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು ಒಳ ಹೋಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ ಈ ಕಳ್ಳರ ಗ್ಯಾಂಗ್ ನ್ನು ಹೆಡೆಮುರಿಕಟ್ಟುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ನಾಗರಕಟ್ಟೆಯ ಪುರುಷೋ ತ್ತಮ (22), ಇದೇ ಜಿಲ್ಲೆಯ ಬಸವನಾಳ್ ಗೊಲ್ಲರಹಟ್ಟಿ ಯ ಚಂದ್ರು (24), ಆದೋಡಿಯ ದರ್ಶನ್ (20) ಬಂಧಿತ ಆರೋಪಿಗಳು. ಈ ಮೂವರು ಬೆಂಗಳೂರಿನ ಕೂಡ್ಲೂ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಸೆ.16ರ ಮಧ್ಯರಾತ್ರಿ ನಿಜಗಲ್ ಬಡಾವಣೆ, ನಂದಿನಿ ಬಡಾವಣೆ, ಟಿ.ಬಿ. ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆ ಕಳ್ಳತನಕ್ಕೆ ಇಳಿದಿದ್ದ ಈ ಆರೋಪಿಗಳು, ಟಿ.ಬಿ ನಾರಾಯಣಪ್ಪ ಬಡಾವಣೆಯಲ್ಲಿ ಯಾರು ಇಲ್ಲದ ಮನೆಗಳಿಗೆ ನುಗ್ಗಿ ಸುಮಾರು 115 ಗ್ರಾಂ ಚಿನ್ನದ ಒಡವೆ ಕದ್ದು ಪರಾರಿಯಾಗಿದ್ದರು.
ದಾವಣಗೆರೆ, ಕೊಪ್ಪಳ, ತುಮಕೂರು ಸೇರಿದಂತೆ ಐದು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಪ್ರಕರಣಗಳು ದಾಖಲಾಗಿವೆ. ಈ ಯಾವುದಕ್ಕೂ ಕ್ಯಾರೆ ಎನ್ನದೇ ತುಮಕೂರಿನಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ, ಜೈಲಿನಿಂದ ಬಿಡುಗಡೆಯಾದನಂತರ ಕಳ್ಳತನ ಮಾಡಿ ಸುಮಾರು ₹12 ಲಕ್ಷ ನಗದನ್ನು ಮೋಜುಮಸ್ತಿಗೆ ಖರ್ಚು ಮಾಡಿದ್ದರು.
ಕಿಟಕಿಗಳಲ್ಲಿ ನೋಡಿಕೊಂಡು ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು ಒಳ ಹೋಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಕಳ್ಳರ ಈ ಗ್ಯಾಂಗಿನ ಎಲ್ಲಾ ದೃಶ್ಯಾವಳಿಗಳು ಮನೆಗಳ ಬಳಿ ಅಳವಡಿಸಿದ್ದ ಸಿ.ಸಿ. ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳನ್ನು ನೋಡಿದ್ದ ಸಾರ್ವಜನಿಕರು ಬೆಚ್ಚಿಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.