ಗುಂಡಮಗೆರೆ ಅರಣ್ಯ ನಾಶ, ಟ್ಯಾಂಕರ್ಗಳಲ್ಲಿ ಕೈಗಾರಿಕೆ ತ್ಯಾಜ್ಯ ತಂದು ಸುರಿದ ಕಿಡಿಗೇಡಿಗಳು
ಸ್ಥಳೀಯ ಸುದ್ದಿ


ದೊಡ್ಡಬಳ್ಳಾಪುರ: ಹಲವು ದಿನಗಳಿಂದ ಟ್ಯಾಂಕರ್‌ಗಳ ಮೂಲಕ ರಾಸಾಯನಿಕ ಯುಕ್ತ ಕೈಗಾರಿಕಾ ತ್ಯಾಜ್ಯ ನೀರನ್ನು ಸುರಿಯುವ ಮೂಲಕ ಅರಣ್ಯ ಪ್ರದೇಶವನ್ನು ನಾಶ ಮಾಡುವ ತಾಲ್ಲೂಕಿನ ಹೊಸಹಳ್ಳಿ, ಗುಂಡಮಗೆರೆ ವ್ಯಾಪ್ತಿಯಲ್ಲಿನ ಮಾಕಳಿ ಅರಣ್ಯ ಪ್ರದೇಶದಲ್ಲಿ ನಡೆದಿದ್ದು ಘಟನೆ ಸಂಬಂಧ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು (FIR) ದಾಖಲಾಗಿದೆ.
ಅಪರಿಚಿತ ದುಷ್ಕರ್ಮಿಗಳು ಕೈಗಾರಿಕಾ ತ್ಯಾಜ್ಯ ನೀರು ಹರಿಬಿಟ್ಟಿರುವ ಕಾರಣ ಸುಮಾರು ಒಂದು ಕಿ.ಮೀ ದೂರದವರೆಗೂ ತ್ಯಾಜ್ಯ ನೀರಿನ ದುರ್ನಾತ ಬೀರುತ್ತಿದೆ. ಈ ವ್ಯಾಪ್ತಿಯ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತ್ಯಾಜ್ಯ ನೀರು ಹರಿದು ಹೋಗಿರುವ ಕಾಲುವೆಗಳ ಅಕ್ಕಪಕ್ಕ ಸಣ್ಣಪುಟ್ಟ ಮರ, ಗಿಡ, ಹುಲ್ಲು ಬೆಂಕಿಯಿಂದ ಸುಟ್ಟಂತೆ ಒಣಗಿ ಹೋಗಿವೆ. ಈ ತ್ಯಾಜ್ಯ ನೀರು ಸುರಿದಿರುವ ಸಮೀಪವೇ ಗುಂಡಮಗೆರೆ ಕೆರೆಗೆ ನೀರು ಹರಿದು ಹೋಗುವ ಅರಣ್ಯ ಪ್ರದೇಶದಲ್ಲಿ ಬೃಹತ್ ಹಳ್ಳವು ಇದೆ. ಹಾಗಾಗಿ ಅಲ್ಪಸ್ವಲ್ಪ ಮಳೆ ಬಂದರು ಸಹ ತ್ಯಾಜ್ಯ ನೀರು ನೇರವಾಗಿ ಕೆರೆ ಸೇರುವ ಅಪಾಯ ಎದುರಾಗಿದೆ.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಸುತ್ತ-ಮುತ್ತಲಿನ ಗ್ರಾಮಗಳ ಜನರು ಜಾಗೃತರಾಗಿರುವ ಹಾಗೂ ರಾತ್ರಿ ವೇಳೆ ಗ್ರಾಮದ ರೈತರು ಗಸ್ತುಗಳನ್ನು ನಡೆಸುವುದರಿಂದ ತ್ಯಾಜ್ಯ ನೀರು ವಿಲೇವಾರಿಗೆ ಕೈಗಾರಿಕೆ ಮಾಲೀಕರು ಗುಂಡಮಗೆರೆ ಅರಣ್ಯ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.