ಬೆಂಗಳೂರು: ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ:ಒಂದೇ ದಿನ 19 ವರ್ಷದ ಯುವಕ,ಯುವತಿ ಸಾವು.
ಜಿಲ್ಲಾ ಸುದ್ದಿರಾಜ್ಯ


ಬೆಂಗಳೂರು: ಇತ್ತೀಚೆಗೆ ಹೃದಯಾಘಾತಕ್ಕೆ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.ಯಾರಿಗೆ, ಯಾವ ವಯಸ್ಸಿಗೆ ಸಾವು ಸಂಭವಿಸುತ್ತದೆ ಎಂದು ಊಹಿಸಲೂ ಅಸಾಧ್ಯ.ರಾಜ್ಯದಲ್ಲಿಒಂದೇ ದಿನ ಎರಡು ಕಡೆ 19 ವರ್ಷದ ಯುವಕ ಹಾಗೂ ಯುವತಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಮಡಿವಾಳ ಬಡಾವಣೆಯ ಸಂಧ್ಯಾ (19) ಸ್ನಾನಗೃಹದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.ಮಡಿವಾಳ ಬಡಾವಣೆ ನಿವಾಸಿಯಾದ ವೆಂಕಟೇಶ್ ಹಾಗೂ ಪೂರ್ಣಿಮ ದಂಪತಿ ಪುತ್ರಿ ಸಂಧ್ಯಾ ಮೃತಪಟ್ಟಿದ್ದಾಳೆ. ಈಕೆ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದು, ಬಾತ್ ರೂಂಗೆ ತೆರಳಿದ ವೇಳೆ ಕುಸಿದು ಬಿದ್ದಿದ್ದಾಳೆ. ತುಂಬಾ ಹೊತ್ತಾದರೂ ಮಗಳು ಬಾತ್ ರೂಂನಿಂದ ಹೊರಗೆ ಬಾರದ ಹಿನ್ನೆಲೆ ಆತಂಕಗೊಂಡ ಪೋಷಕರು ಬಾಗಿಲು ಒಡೆದು ನೋಡಿದಾಗ ಯುವತಿ ಕುಸಿದು ಬಿದ್ದಿರುವುದನ್ನು ಕಂಡು ಪೋಷಕರು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ, ಆದರೆ ಅಷ್ಟರಲ್ಲೇ ಯುವತಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಬೆಂಗಳೂರಿನಲ್ಲಿ ಕ್ಯಾಬ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದ ಅಭಿಷೇಕ್ (19) ಎಂದು ಗುರುತಿಸಲಾಗಿದೆ. ಯುವಕ, ಗ್ರಾಮದ ಅನಸೂಯ ಹಾಗೂ ರಾಮಕೃಷ್ಣ ದಂಪತಿ ಪುತ್ರ ಎಂದು ತಿಳಿದು ಬಂದಿದೆ.
ಅಭಿಷೇಕ್ ಬಸವೇಶ್ವರ ನಗರದಲ್ಲಿ ನಿಂತಿದ್ದ ಜಾಗದಲ್ಲೇ ಕುಸಿದು ಬಿದ್ದಿದ್ದ. ಆತನನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಮಾರ್ಗ ಮಧ್ಯೆಯೇ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.