ಎರಡು ದಿನ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

ರಾಜ್ಯ

Raghavendra H A

5/19/20251 min read

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಇಂದು ಮತ್ತು ನಾಳೆಯೂ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಯೆಲ್ಲೂ ಆಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಎನ್ ಪುವಿಯರಸು ತಿಳಿಸಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಅವರು, ಸದ್ಯದ ಚಂಡಮಾರುತದ ಪ್ರಕಾರ, ವಿಶೇಷವಾಗಿ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರಿನಲ್ಲಿಯೂ ಮುಂದಿನ ಎರಡು ದಿನ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದಿದ್ದಾರೆ.

ಭಾನುವಾರದಂದು ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜಲಾವೃತವಾಗಿದ್ದವು. ಭಾರಿ ಮಳೆಯಿಂದಾಗಿ ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ವ್ಯತ್ಯಯ ಉಂಟಾಗಬಹುದು. ಸಣ್ಣಪುಟ್ಟ ಸಂಚಾರ ದಟ್ಟಣೆ ಹಾಗೂ ಮರ, ರೆಂಬೆ, ಕೊಂಬೆಗಳು ಬೀಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬೆಂಗಳೂರು ಸೇರಿದಂತೆ ರಾಜ್ಯದ 23 ಜಿಲ್ಲೆಗಳಲ್ಲಿ ಗುರುವಾರದವರೆಗೂ ಭಾರಿ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಭಾನುವಾರ ನೀಡಿತ್ತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಮೈಸೂರು, ಹಾಸನ, ಕೊಡಗು, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ದಾವಣಗೆರೆ ಮತ್ತು ಚಿತ್ರದಲ್ಲಿ ಮಳೆಯಾಗಲಿದೆ ಎಂದು ಹೇಳಿತ್ತು.

ಇಂದು ಬೆಳಗ್ಗೆ ನೀಡಿರುವ ಹೇಳಿಕೆ ಪ್ರಕಾರ, ಚಂಡಮಾರುತವು ಆಗ್ನೇಯ ಬಂಗಾಳ ಕೊಲ್ಲಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಿಂದ ಉತ್ತರ ತಮಿಳುನಾಡಿನವರೆಗೆ ವ್ಯಾಪಿಸಿದ್ದು, ದಕ್ಷಿಣ ಭಾರತದಾದ್ಯಂತ ಮಳೆಯನ್ನು ತೀವ್ರಗೊಳಿಸುತ್ತಿದೆ.

IMD ಬುಲೆಟಿನ್ ಪ್ರಕಾರ ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 103 ಮಿಮೀ ಮಳೆಯಾಗಿದೆ. ಇದುವರೆಗೆ ಅತಿ ಹೆಚ್ಚು ಮಳೆ ಪೀಡಿತ ಪ್ರದೇಶಗಳಲ್ಲಿ ಬೆಂಗಳೂರು ಒಂದಾಗಿದೆ ಮಹದೇವಪುರ ವಲಯದ ಹೊರಮಾವುನಲ್ಲಿರುವ ಸಾಯಿ ಲೇಔಟ್ ನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಯಿಂದ 4-5 ಅಡಿ ನೀರು ರಸ್ತೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ಹಾಗೂ ಪ್ರಯಾಣಿಕರು ತೀವ್ರವಾಗಿ ಪರದಾಡುವಂತಾಯಿತು. ಚರಂಡಿಗಳು ಮುಚ್ಚಿಹೋಗಿದ್ದು, ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟ್ಯಾನರಿ ರಸ್ತೆಯ ಎನ್‌ಸಿ ಕಾಲೋನಿಯ ಮನೆಗಳಿಗೂ ನೀರು ನುಗ್ಗಿದೆ.