ತುಂಡು ಬಟ್ಟೆ ಹಾಕಿದ್ದಕ್ಕೆ ಬುದ್ಧಿ ಹೇಳಿದ ಹೋಮ್ ಗಾರ್ಡ್ : ಜುಟ್ಟಿಡಿದು ಎಳೆದಾಡಿ ಥಳಿಸಿದ ಯುವತಿ..!
ಸ್ಥಳೀಯ ಸುದ್ದಿ


ಬೆಂಗಳೂರು: ಯುವತಿಗೆ ಹೋಮ್ ಗಾರ್ಡ್ ಬುದ್ದಿ ಹೇಳಿದ್ದಕ್ಕೆ ಕೆಂಡಮಂಡಲವಾಗಿ"ನನಗೆ ಬುದ್ದಿ ಹೇಳಕೆ ನೀನ್ಯಾರು" ಎಂದು ಹೋಮ್ ಗಾರ್ಡ್ ನ್ನು ಜುಟ್ಟು ಇಟ್ಕೋಂಡು ಎಳೆದಾಡಿ ಹಿಗ್ಗಾಮುಗ್ಗಾ ಹಲ್ಲೆ ಮಾಡಿದ ಘಟನೆ ಕೆ.ಆರ್.ಪುರ ರೈಲ್ವೆ ನಿಲ್ದಾಣ ಬಳಿ ನಡೆದಿದೆ.
ಕೆ.ಆರ್. ಪುರ ರೈಲ್ವೆ ನಿಲ್ದಾಣ ಸರ್ಕಲ್ ಬಳಿ ಶುಕ್ರವಾರ ಮಧ್ಯಾಹ್ನ 3 ಗಂಟೆಯ ವೇಳೆ ಮೋಹಿನಿ ತುಂಡು ಬಟ್ಟೆ ಧರಿಸಿ ಓಡಾಡುತ್ತಿದ್ದಳು ಎನ್ನಲಾಗಿದೆ. ಆಕೆಯನ್ನು ನೋಡಿದ ಕೆಲ ಯುವಕರು ಚುಡಾಯಿಸಲು ಶುರು ಮಾಡಿದ್ದರು. ಅಲ್ಲದೆ, ಬಸ್‌ಗಾಗಿ ರಸ್ತೆಯಲ್ಲೇ ಹತ್ತಾರು ಮಂದಿ ನಿಂತಿದ್ದರು. ಅದೇ ವೇಳೆ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಾಣಸವಾಡಿ ಸಂಚಾರ ಪೊಲೀಸ್ ಠಾಣೆಯ ಹೋಮ್ ಗಾರ್ಡ್ ಲಕ್ಷ್ಮಿ ನರಸಮ್ಮ ಅವರು, ಯುವತಿಗೆ ಬೈದು, ರಸ್ತೆ ಬದಿ ಬಂದು ನಿಲ್ಲುವಂತೆ ಬುದ್ದಿವಾದ ಹೇಳಿದ್ದಾರೆ. ಅದರಿಂದ ಕೆರಳಿದ ಆಕೆ ನನಗೆ ಬುದ್ಧಿ ಹೇಳೋಕೆ ನೀನ್ಯಾರು? ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಲಕ್ಷ್ಮಿ ನರಸಮ್ಮ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾಳೆ. ಅಲ್ಲದೆ, ಲಕ್ಷ್ಮಿ ನರಸಮ್ಮ ಅವರ ಜುಟ್ಟು ಹಿಡಿದು, ರಕ್ತ ಬರುವಂತೆ ಥಳಿಸಿದ್ದಾಳೆ. ಈ ವೇಳೆ ಕೆಲವರು ಮಧ್ಯ ಪ್ರವೇಶಿಸಿ ಯುವತಿಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದರೂ ಕೂಡ ಯುವತಿ ಅವರ ಸಮ್ಮುಖದಲ್ಲಿಯೇ ಹಲ್ಲೆ ನಡೆಸಿದ್ದಾಳೆ ಎಂದು ಹೋಮ್‌ಗಾರ್ಡ್ ಆರೋಪಿಸಿದ್ದಾರೆ.
ಹಲವು ವರ್ಷಗಳಿಂದ ಹೋಮ್ ಗಾರ್ಡ್ ಆಗಿ ಕರ್ತವ್ಯ ನಿರ್ವಸುತ್ತಿರುವ ಲಕ್ಷ್ಮಿ ನರಸಮ್ಮ ಮೇಲೆ ಈ ರೀತಿ ಹಲ್ಲೆ ನಡೆದಿರುವುದು ದುರದೃಷ್ಟಕರ ಸಂಗತಿ. ಈ ಘಟನೆ ಸಂಬಂಧ ರಾಮಮೂರ್ತಿ ನಗರ ಠಾಣೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಪ್ರಕರಣ ದಾಖಲಿಸಿಕೊಂಡು ಹಲ್ಲೆ ನಡೆಸಿದ ಮೋಹಿನಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.