HOSKOTE: ಓವರ್ ಟೇಕ್ ಮಾಡಲು ಹೋಗಿ ಅಪಘಾತ: ಲಾರಿಗೆ ಸಾರಿಗೆ ಬಸ್ ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವು.!
ಸ್ಥಳೀಯ ಸುದ್ದಿಕ್ರೈಮ್


ಹೊಸಕೋಟೆ: ಆಂಧ್ರಪ್ರದೇಶದ ಸಾರಿಗೆ ಬಸ್ವೊಂದು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಗೊಟ್ಟಿಪುರ ಗೇಟ್ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಘಟನೆಯಲ್ಲಿ ಬಸ್ನಲ್ಲಿದ್ದ ಕೇಶವರೆಡ್ಡಿ (44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಮೃತಟಪಟಿದ್ದಾರೆ.
16 ಪ್ರಯಾಣಿಕರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಹೊಸಕೋಟೆಯ ಸಿಲಿಕಾನ್ ಸಿಟಿ ಹಾಗೂ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ತಿರುಪತಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್, ಲಾರಿಯನ್ನು ಹಿಂದಿಕ್ಕುವ (ಓವರ್ ಟೇಕ್) ಭರದಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಬಸ್ ಸಂಪೂರ್ಣ ಜಖಂಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಡಿವೈಎಸ್ಪಿ ಮಲ್ಲೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಸ್ಥಳಕ್ಕೆ ಆಗಮಿಸಿದ ಸಂಚಾರವನ್ನು ಸರಾಗಗೊಳಿಸಿದರು.
ಅಪಘಾತದ ಪ್ರಾಥಮಿಕ ತನಿಖೆಯ ಪ್ರಕಾರ, ಬಸ್ ಚಾಲಕ ಓವರ್‌ಟೇಕ್ ಮಾಡುವ ಭರದಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಯಿಂದ ಬಸ್‌ನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಇಲ್ಲವೇ ಅಜಾಗರೂಕತೆಯಿಂದ ಓವರ್‌ಟೇಕ್ ಮಾಡಲು ಯತ್ನಿಸಿದ್ದು ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಈ ಘಟನೆ ಹೊಸಕೋಟೆ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.