ಹೊಸಕೋಟೆ: ಪುರಾಣ, ಸಂಸ್ಕೃತಿ ಪರಿಚಯಿಸುವ ದಸರ ಗೊಂಬೆಗಳು

ಸ್ಥಳೀಯ ಸುದ್ದಿಜಿಲ್ಲಾ ಸುದ್ದಿ

ಧರ್ಮ ಬಸವನಪುರ.

9/30/20251 min read

ಹೊಸಕೋಟೆ: ನವರಾತ್ರಿ ಅಂಗವಾಗಿ ನಗರದ ವಿವೇಕಾನಂದ ನಗರ ಬಡಾವಣೆಯ ಶ್ರೀ ವಿದ್ಯಾರಮೇಶ್ ದಂಪತಿಗಳ ಮನೆಯಲ್ಲಿ ಕೂರಿಸಿರುವ ದಸರಾ ಗೊಂಬೆಗಳು ಮನಸೂರೆಗೊಳ್ಳುತ್ತಿವೆ. ದೇಶದ ವಿವಿಧೆಡೆಯಿಂದ ತಂದಿರುವ ಗೊಂಬೆಗಳು ದೈವೀಕ ಭಾವನೆಯನ್ನು ಸೃಷ್ಟಿಸುತ್ತಿವೆ.

         ರಮೇಶ್ ಪತ್ನಿ ಶ್ರೀ ವಿದ್ಯಾ ಅವರು ಸುಮಾರು ಮೂರು ತಲೆಮಾರುಗಳಿಂದ ಇವರ ಮನೆಯಲ್ಲಿನ ಈ ದಸರಾ ಗೊಂಬೆ ಹಬ್ಬದ ಆಚರಣೆ ನಡೆಸಿಕೊಂಡು ಬರುತ್ತಿದ್ದಾರೆ. ವೈವಿಧ್ಯಮಯ ಗೊಂಬೆಗಳು, ಅವನ್ನು ಜೋಡಿಸಿಟ್ಟ ರೀತಿ ಅತ್ಯಂತ ಆಕರ್ಷಕವಾಗಿದೆ.ಭಕ್ತಿಪೂರ್ಣವಾಗಿ ಗೊಂಬೆ ಪ್ರತಿಷ್ಠಾಪಿಸಿ ನಿತ್ಯವೂ ಆರಾಧನೆ ಮಾಡುತ್ತಿದ್ದಾರೆ.

   ಹೊಸಕೋಟೆ ಕುರುಬರ ಪೇಟೆ ಚೌಡೇಶ್ವರಿ ದೇವಿ ಸನ್ನಿಧಿಯ ಪುರೋಹಿತರಾದ ರಮೇಶ್ ಅವರ ಪೋಷಕರು ಅವರು 80ರ ದಶಕದಿಂದಲೂ ನಡೆಸಿಕೊಂಡು ಬಂದಿದ್ದ ಪರಂಪರೆಯನ್ನು ಈ ಮಗ- ಸೊಸೆ ಮತ್ತು ಮೊಮ್ಮಕ್ಕಳಾದ ಗೋಕುಲ್ ಅಯ್ಯರ್, ರಾಹುಲ್ ಅಯ್ಯರ್ ಬಹಳ ಸಂಭ್ರಮದಿಂದ ಮುನ್ನಡೆಸಿಕೊಂಡು ಬರುತ್ತಿದ್ದಾರೆ.

    ಮನೆಯ ಮೂಲೆ ಸೇರಿದ್ದ ನೂರಾರು ಗೊಂಬೆಗಳನ್ನು ಇದೀಗ ಮನೆಯ ಹಾಲ್‌ನಲ್ಲಿ ಜಾಗ ಮಾಡಿಕೊಂಡು ಮೂರರಿಂದ ಇಪ್ಪತ್ತು ಸ್ಟೆಪ್‌ವರೆಗೂ ವಿವಿಧ ಆಕೃತಿಯ ಗೊಂಬೆಗಳನ್ನು ಕೂರಿಸಲಾಗಿದೆ. ರಾಜ ಪ್ರದರ್ಶನ ದೇವತಾ ಎಂಬ ಮಾತಿನಂತೆ ಚಂದದ ಪಟ್ಟದ ಗೊಂಬೆಗೆ ರಾಜ-ರಾಣಿಯಂತೆ ಅಲಂಕಾರ ಮಾಡಿ, ಅಗ್ರ ಸ್ಥಾನದಲ್ಲಿ ಮಂಟಪ ನಿರ್ಮಿಸಿ ಅದರಲ್ಲಿ ಪ್ರತಿಷ್ಟಾಪಿಸಿದ್ದಾರೆ. ನಂತರದ ಸಾಲುಗಳಲ್ಲಿ ದಶವತಾರ, ನವದುರ್ಗಿಯರು, ಅಷ್ಟಲಕ್ಷ್ಮೀ, ಕೃಷ್ಣವತಾರ, ಕಾಳಿಂಗ ಮರ್ಧನ, ಶ್ರೀರಾಮ ಪಟ್ಟಾಭಿಶೇಕ, ಮುವ್ವತ್ತು ವರ್ಷಗಳ ಹಿಂದಿನ ರಾಮ ಮತ್ತು ಕೃಷ್ಣರ ಅಪರೂಪದ ಮೂರ್ತಿಗಳು, ಶೆಟ್ಟಪ್ಪ ಶೆಟ್ಟಮ್ಮ, ಅವರ ಅಂಗಡಿಗೆ ದಿನಸಿ ತರುವ ಗಾಡಿ, ಹಣ್ಣು ತರುವವರು, ಈಶ್ವರನ ಅಭಿಷೇಕಕ್ಕೆ ಗಣಪತಿಯ ವಾದ್ಯಗೋಷ್ಠಿ ಆಕರ್ಷನೀಯವಾಗಿ ಜೋಡಿಸಲಾಗಿದೆ. ಪ್ರತಿವರ್ಷ ನವರಾತ್ರಿ ಪಾಡ್ಯದಿನದಿಂದಲೇ ಗೊಂಬೆಗಳನ್ನು ಜೊಡಿಸಿ, ಪೂಜಿಸುತ್ತಾ ಬರುತ್ತಾರೆ.

    ತುಂಬಾ ಆಕರ್ಷಕ ರೀತಿಯಲ್ಲಿ ಕಾಣುವ ಹುಲಿಯ ಮೇಲೆ ಕುಳಿತಿರುವ ಚಾಮುಂಡೇಶ್ವರಿ ಗೊಂಬೆಯು ಬಹಳ ಸೊಗಸಾಗಿದೆ. ಚಾಮುಂಡಿಯ ಎರಡೂ ಕಡೆ ಆನೆಗಳು, ಸೈನಿಕರ ಗೊಂಬೆಗಳು ಗಮನ ಸೆಳೆಯುತ್ತಿವೆ. ಕಳಶ ಹಾಗೂ ತೆಂಗಿನಕಾಯಿಯಿಂದ ದೇವಿಯನ್ನು ಪ್ರತಿಷ್ಠಾಪಿಸಿ ಸುತ್ತಲೂ ಅಷ್ಟಲಕ್ಷ್ಮಿಯರ ಗೊಂಬೆಗಳನ್ನು ಕೂರಿಸಲಾಗಿದೆ.

        ಮೈಸೂರು ಅರಮನೆಯನ್ನು ಹೋಲುವ ಪ್ರತಿಕೃತಿಯನ್ನೂ ಕಾಣಬಹುದು. ಅದರ ಮುಂದೆ ಸೈನಿಕರು, ಸಂಗೀತಗಾರರ ಗೊಂಬೆಗಳು ಇವೆ. ಜೊತೆಗೆ ವೆಂಕಟೇಶ್ವರ, ಪದ್ಮಾವತಿ, ವಿಠಲ- ರುಕ್ಮಿಣಿ ಗೊಂಬೆಗಳನ್ನೂ ಕೂರಿಸಲಾಗಿದೆ. ಗೊಂಬೆ ದರ್ಶನದಲ್ಲಿ ಕೈಲಾಸ ಪರ್ವತವನ್ನೂ ಸೃಷ್ಟಿಸಲಾಗಿದ್ದು ಶಿವ-ಪಾರ್ವತಿಯ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಕೈಲಾಸದಲ್ಲಿ ನಡೆಯುವ ನ್ಯಾಯಪೀಠದ ಚಿತ್ರಣವನ್ನೂ ಕಾಣಬಹುದಾಗಿದೆ.

ಋಷಿ ಮುನಿಗಳು, ಮದುವೆ ಮಂಟಪ, ವರ-ವಧು, ಓಲಗದವರು ಮುಂತಾದ ಚಿತ್ರಣವನ್ನು ಗೊಂಬೆಗಳ ಮೂಲಕ ಕಟ್ಟಿಕೊಡಲಾಗಿದೆ. ಜೊತೆಗೆ ಹಳ್ಳಿಯ ವಾತಾವರಣ, ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸುತ್ತಿರುವ ಶಿಕ್ಷಕಿಯ ಚಿತ್ರಣವನ್ನು ಗೊಂಬೆಗಳ ಮೂಲಕ ರೂಪಿಸಲಾಗಿದೆ. ಅಯೋಧ್ಯೆ ಶ್ರೀರಾಮ ದೇವಾಲಯ, ಕಾಶಿ ವಿಶ್ವನಾಥ, ಪುರಿ ಜಗನ್ನಾಥ ದೇವಾಲಯಗಳ ಪ್ರತಿರೂಪಗಳನ್ನು ಕಾಣಬಹುದು.

ಗೊಂಬೆಗಳ ಪ್ರತಿಷ್ಠಾಪನೆ ಮಾತ್ರವಲ್ಲದೇ ನಿತ್ಯವೂ ದೇವಿ ಮಹಾತ್ಮೆ ಪಾರಾಯಣ, ಆರತಿ, ಮನೆಗೆ ಬಂದವರಿಗೆ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದಲ್ಲೂ ಗೊಂಬೆಗಳನ್ನಿಡುವ ಸಂಪ್ರದಾಯವಿದೆ. ನಮ್ಮಜ್ಜಿ-ತಾತ ಗೊಂಬೆ ಇಡುವುದನ್ನು ನಮಗೆ ಕಲಿಸಿಕೊಟ್ಟರು. ಮಕ್ಕಳು ಜೊತೆಗೂಡುತ್ತಾರೆ. ಎಲ್ಲರೂ ಕಲೆತು ಗೊಂಬೆಗಳನ್ನು ಜೋಡಿಸುವ ಸಂಭ್ರಮ ಸದಾ ನೆನಪಿನಲ್ಲಿ ಉಳಿಯುತ್ತದೆ ಹೊಸಕೋಟೆ ಚೌಡೇಶ್ವರಿ ದೇವಿ ದೇವಾಲಯದ ಪುರೋಹಿತರು ಆದ ಶ್ರೀ ವಿದ್ಯಾ ರಮೇಶ್ ದಂಪತಿಗಳು ತಿಳಿಸಿದರು

ಗೊಂಬೆಗಳಿಗೆ ಪೂಜೆ, ಪುರಸ್ಕಾರ:

ದಸರಾ ಹಬ್ಬದ ವೇಳೆ ಗೊಂಬೆಗಳನ್ನು ಕೂರಿಸಿ ಪೂಜೆ ಪುರಸ್ಕಾರಗಳನ್ನು ಮಾಡಲಾಗಿದೆ. ಇತ್ತೀಚೆಗೆನ ದಿನಗಳಲ್ಲಿ ಗೊಂಬೆಗಳನ್ನು ಕೂರಿಸುವುದು ಕಡಿಮೆಯಾಗುತ್ತಿದೆ. ನಮ್ಮ ಸನಾತನ ಸಂಸ್ಕೃತಿ ಉಳಿವಿಗೆ ಈಗೀನ ಮಕ್ಕಳಿಗೆ ಇಂತಹ ವಿಚಾರ ಗಳನ್ನು ತಿಳಿಸಲು ಇಂತಹ ಗೊಂಬೆಗಳನ್ನು ಕೂರಿಸಿ ಅಲಂಕರಿಸುವುದು ಅನಿವಾರ್ಯವಾಗಿದೆ. ಆಚಾರ -ವಿಚಾರವನ್ನು ತಿಳಿಯಬೇಕು ಎಂಬುವುದು ನಾಗರೀಕರ ಅಭಿಪ್ರಾಯವಾಗಿದೆ. ಒಂಭತ್ತು ದಿನವೂ ಸಹ ಬೆಳಗ್ಗೆ, ಸಂಜೆ ಪೂಜೆ ಮಾಡುತ್ತಿದ್ದಾರೆ. ಪಾರಾಯಣ ಮಾಡುವ ಮಹಿಳೆಯರು ಮಕ್ಕಳು ಬಂದು ದೇವರ ಹಾಡುಗಳನ್ನು ಹಾಡಿಡುತ್ತಾರೆ. ನಮ್ಮ ಹಿಂದೂ ಸನಾತನ ಸಂಸ್ಕೃತಿ ನಮ್ಮ ಪರಂಪರೆ ಬಗ್ಗೆ ಗೊಂಬೆ ಪ್ರದರ್ಶನದ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.