ಆನೇಕಲ್: ಅಕ್ರಮ ಸಂಬಂಧ: ಪತ್ನಿ ಕೊಂದು ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ಪತಿರಾಯ.!

ಸ್ಥಳೀಯ ಸುದ್ದಿರಾಜ್ಯ

ಧರ್ಮ ಬಸವನಪುರ.

6/7/20251 min read

ಆನೇಕಲ್: ಪತ್ನಿಯ ಅಕ್ರಮ ಸಂಬಂಧದಿಂದ ರೋಸಿಹೋಗಿದ್ದ ಪತಿ, ಆಕೆಯ ರುಂಡವನ್ನು ಕಡಿದು ಅದನ್ನು ಕೈಯಲ್ಲಿ ಹಿಡಿದುಕೊಂಡು ಬಂದು ಪೊಲೀಸ್‌ ಠಾಣೆಗೆ ಶರಣಾಗಿದ್ದಾನೆ. ಮಹಿಳೆಯ ರುಂಡವನ್ನು ಆರೋಪಿಯ ಕೈಯಲ್ಲಿ ಕಂಡು ಸ್ವತಃ ಪೊಲೀಸರೇ ಗಾಬರಿಯಾಗಿದ್ದಾರೆ.

ಪತ್ನಿ ರುಂಡದ ಜೊತೆ ಪೊಲೀಸ್ ಠಾಣೆಗೆ ಬಂದ ವ್ಯಕ್ತಿಯನ್ನು ಕಂಡು ಆಘಾತಗೊಂಡ ಪೊಲೀಸರು ತಕ್ಷಣವೇ ಆತನನ್ನು ಬಂದಿಸಿದ್ದಾರೆ.ಹೆಂಡತಿಯನ್ನು ಕೊಲೆ ಮಾಡಿದ್ದ ಗಂಡ, ಆಕೆಯ ರುಂಡವನ್ನು ಕಡಿದು ಬೈಕ್‌ನಲ್ಲಿ ತೆಗೆದುಕೊಂಡು ಸೂರ್ಯನಗರ ಠಾಣೆಗೆ ಶರಣಾಗಿದ್ದಾನೆ.

ಹೆನ್ನಾಗರ ನಿವಾಸಿ 28 ವರ್ಷದ ಶಂಕರ್, ಪತ್ನಿಯ ರುಂಡ ಕಡಿದ ಆರೋಪಿ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹಾಗೂ ಚಂದಾಪುರ ಸಮೀಪದ ಹೀಲಲಿಗೆ ಗ್ರಾಮದಲ್ಲಿ ಘಟನೆ ನಡೆದಿದೆ. ಹೆಬ್ಬಗೋಡಿ ನಿವಾಸಿ 26 ವರ್ಷದ ಮಾನಸ ಮೃತ ಮಹಿಳ. ಅಕ್ರಮ ಸಂಬಂಧ ಹಿನ್ನೆಲೆ ಪತ್ನಿಯನ್ನು ಶಂಕರ್‌ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮಾನಸ ಹಾಗೂ ಶಂಕರ್‌ ಕೆಲ ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು ಎನ್ನಲಾಗಿದೆ. ತಿಂಗಳ ಹಿಂದೆಯಷ್ಟೇ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಜೋಡಿ ಶಿಫ್ಟ್‌ ಆಗಿತ್ತು. ಇದೇ ತಿಂಗಳು 3ನೇ ತಾರೀಖು ರಾತ್ರಿ ಕೆಲಸ ನಿಮಿತ್ತ ಶಂಕರ್‌ ಮನೆಯಿಂದ ತೆರಳಿದ್ದ.

ನಾಳೆ ಬೆಳಗ್ಗೆ ಬರುವುದಾಗಿ ಶಂಕರ್‌, ಮಾನಸಗೆ ತಿಳಿಸಿ ಹೋಗಿದ್ದ ಎನ್ನಲಾಗಿದೆ. ಆದರೆ, ಕೆಲಸ ಬೇಗ ಮುಗಿದ ಹಿನ್ನೆಲೆಯಲ್ಲಿ, ಪತ್ನಿ ಒಬ್ಬಳೇ ಇದ್ದಾಳೆಂದು ತಡರಾತ್ರಿಯೇ ಮನೆಗೆ ವಾಪಸ್‌ ಆಗಿದ್ದ.

ಈ ವೇಳೆ ಪತ್ನಿ ಮಾನಸ ಪ್ರಿಯಕರನ ಜೊತೆ ಚಕ್ಕಂದವಾಡುತ್ತಿರುವುದು ಗೊತ್ತಾಗಿದೆ. ರೆಡ್‌ಹ್ಯಾಂಡ್‌ ಆಗಿ ಇಬ್ಬರೂ ಶಂಕರ್‌ನ ಕೈಗೆ ಸಿಕ್ಕಿದ್ದಾರೆ. ಆಕ್ರೋಶಗೊಂಡ ಶಂಕರ್ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ನೀನು ನನಗೆ ಬೇಡ ಎಂದು ಪ್ರಿಯಕರನ ಜೊತೆಯಲ್ಲೇ ಮಾನಸಳನ್ನು ಕಳಿಸಿದ್ದ. ಆದರೆ, ಪತ್ನಿ ಮಾನಸ ಪದೇ ಪದೇ ಮನೆಗೆ ಬಂದು ಪತಿಗೆ ಟಾರ್ಚರ್‌ ನೀಡುತ್ತಿದ್ದಳು. ಶುಕ್ರವಾರ ರಾತ್ರಿ ಸಹ ಮನೆಗೆ ಬಂದು ಗಲಾಟೆ ಮಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಶಂಕರ್ ಆಕೆಯನ್ನು ಕೊಂದಿದ್ದು ಮಾತ್ರವಲ್ಲದೆ, ತಲೆ ಕಡಿದು ಅದನ್ನು ಬೈಕ್‌ ಮೇಲೆ ಇರಿಸಿಕೊಂಡು ಪೊಲೀಸ್‌ ಠಾಣೆಗೆ ಬಂದಿದ್ದಾನೆ. ಸ್ಥಳಕ್ಕೆ ಸೂರ್ಯನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.