ಕಬ್ಬಡಿ ಕ್ರೀಡೆಗೆ ಅಂತಾರಾಷ್ಟ್ರೀಯ ಮಾನ್ಯತೆ :ಅರವಿಂದ ಲಿಂಬಾವಳಿ
ಸ್ಥಳೀಯ ಸುದ್ದಿ


ಮಹದೇವಪುರ: ಕಬ್ಬಡಿ ನಮ್ಮ ದೇಶದ ಪರಂಪರೆಯ ಹೆಮ್ಮೆಯ ಕ್ರೀಡೆಯಾಗಿದ್ದು, ಇಂದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದಿರುವುದು ಸಂತಸದ ವಿಚಾರ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.
ಕ್ಷೇತ್ರದ ಚನ್ನಸಂದ್ರ ಸರ್ಕಾರಿ ಶಾಲಾ ಮೈದಾನದಲ್ಲಿ ಚಾನ್ ಸಿಟಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಬಾಲಕ–ಬಾಲಕಿಯರ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಬ್ಬಡಿ ಕ್ರೀಡೆಯು ಕೇವಲ ಮನೋರಂಜನೆಯಷ್ಟೇ ಅಲ್ಲದೇ, ದೈಹಿಕ ಶಕ್ತಿ, ಚುರುಕುತನ, ಸಹನಶೀಲತೆ ಮತ್ತು ತಂಡಸ್ಫೂರ್ತಿಯನ್ನು ಬೆಳೆಸುವ ಅತ್ಯುತ್ತಮ ಕ್ರೀಡೆಯಾಗಿದೆ ಎಂದರು.
ವಿಶೇಷವಾಗಿ ಯುವ ಕ್ರೀಡಾಪಟುಗಳಲ್ಲಿ ಶಿಸ್ತು, ಧೈರ್ಯ ಮತ್ತು ಆತ್ಮವಿಶ್ವಾಸ ವೃದ್ಧಿಸುವಲ್ಲಿ ಕಬ್ಬಡಿ ಪ್ರಮುಖ ಪಾತ್ರವಹಿಸುತ್ತದೆ. ಆರೋಗ್ಯದ ದೃಷ್ಟಿಯಿಂದಲೂ ದೇಹವನ್ನು ಸದೃಢವಾಗಿರಿಸುವ ಕ್ರೀಡೆಯಾಗಿದ್ದು, ಗ್ರಾಮೀಣ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗುತ್ತದೆ” ಎಂದು ಹೇಳಿದರು.
ಪಂದ್ಯಾವಳಿ ನಂತರ ವಿಜೇತರಾದ ತಂಡಗಳಿಗೆ ಬಹುಮಾನಗಳನ್ನು ವಿತರಿಸಿ, ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಎಸ್.ಪಿಳ್ಳಪ್ಪ, ಮುಖಂಡರಾದ ಚನ್ನಸಂದ್ರ ಚಂದ್ರಶೇಖರ್, ಕೃಷ್ಣಮೂರ್ತಿ, ಮಧು, ಲಕ್ಷ್ಮೀನಾರಾಯಣ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.