ಇಸ್ರೇಲ್​ ವೈಮಾನಿಕ ದಾಳಿ: ಇರಾನ್​ನ ಮೇಜರ್ ಜನರಲ್​ಗಳು, 6 ಪರಮಾಣು ವಿಜ್ಞಾನಿಗಳು ಸೇರಿ 78 ಮಂದಿ ಸಾವು

ದೇಶ/ವಿದೇಶ

Raghavendra H A

6/13/20251 min read

ಜೆರುಸೆಲಂ: ಟೆಹ್ರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹಲವಾರು ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳು "ಹುತಾತ್ಮರಾಗಿದ್ದಾರೆ" ಎಂದು ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ ಶುಕ್ರವಾರ ದೃಢಪಡಿಸಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿಯಲ್ಲಿ 78 ಜನರು ಮೃತಪಟ್ಟಿದ್ದು, 329 ಮಂದಿ ಗಾಯಗೊಂಡಿದ್ದಾರೆ. ಸಾವನ್ನಪ್ಪಿದವರಲ್ಲಿ ಇರಾನ್‌ನ ಪರಮಾಣು ಇಂಧನ ಸಂಸ್ಥೆಯ ಮಾಜಿ ಮುಖ್ಯಸ್ಥ ಫೆರೆಡೌನ್ ಅಬ್ಬಾಸಿ ಸೇರಿದಂತೆ 6 ಪರಮಾಣು ವಿಜ್ಞಾನಿಗಳು ಸಹ ಸೇರಿದ್ದಾರೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಜನರಲ್ ಅಮೀರ್ ಅಲಿ ಹಾಜಿಜಾದೆ ಹತ್ಯೆಯಾಗಿರುವುದನ್ನು ಇರಾನ್ ದೃಢಪಡಿಸಿದೆ.

ಇವರ ಜೊತೆಗೆ ಪ್ಯಾರಾಮಿಲಿಟರಿ ರೆವಲ್ಯೂಷನರಿ ಗಾರ್ಡ್ ಅಥವಾ ಐಆರ್‌ಜಿಸಿಯ ಕಮಾಂಡರ್ ಇನ್ ಚೀಫ್ ಮೇಜರ್ ಜನರಲ್ ಹೊಸೇನ್ ಸಲಾಮಿ, ಖತಮ್-ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ಕಮಾಂಡರ್ ಮೇಜರ್ ಜನರಲ್ ಘೋಲಮ್ ಅಲಿ ರಶೀದ್ ಸಹ ಕೊಲ್ಲಲ್ಪಟ್ಟಿದ್ದಾರೆ ಎಂದು ತಿಳಿಸಿದೆ.

ದಾಳಿಯ ಸಮಯದಲ್ಲಿ, ಇರಾನ್​ನ ಕ್ರಾಂತಿಕಾರಿ ಗಾರ್ಡ್‌ನ ಕ್ಷಿಪಣಿ ಕಾರ್ಯಕ್ರಮದ ಮುಖ್ಯಸ್ಥ ಜನರಲ್ ಹಾಜಿಜಾದೆ ಹತ್ಯೆಯಾಗಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ. ಇರಾನ್ ಈ ಹಿಂದೆ ಈ ಹೇಳಿಕೆಯನ್ನು ನಿರಾಕರಿಸಿತ್ತು. ಆದರೆ ಈಗ ಅದನ್ನು ದೃಢಪಡಿಸಿದೆ. ಈ ದಾಳಿಯ ಸಮಯದಲ್ಲಿ 6 ಪ್ರಮುಖ ಪರಮಾಣು ವಿಜ್ಞಾನಿಗಳು ಮತ್ತು ಹಲವಾರು ಹಿರಿಯ ಮಿಲಿಟರಿ ನಾಯಕರು ಸಹ ಸಾವನ್ನಪ್ಪಿದ್ದರು. ಇಸ್ರೇಲ್ ವಾಯುದಾಳಿಯಲ್ಲಿ ಇರಾನ್‌ನ ಉನ್ನತ ಮಿಲಿಟರಿ ಅಧಿಕಾರಿ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಮೇಜರ್ ಜನರಲ್ ಮೊಹಮ್ಮದ್ ಬಾಘೇರಿ ಸಾವನ್ನಪ್ಪಿದರು.

ಇರಾನ್‌ನ ಪರಮಾಣು ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದ ಆರು ವಿಜ್ಞಾನಿಗಳು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ದೃಢಪಡಿಸಿವೆ, ಅವರಲ್ಲಿ ನಾಲ್ವರು ಫೆರೆಡೌನ್ ಅಬ್ಬಾಸಿ-ದವಾನಿ, ಮೊಹಮ್ಮದ್ ಮೆಹದಿ ಟೆಹ್ರಾನ್ಚ್, ಅಹ್ಮದ್ ರೆಜಾ ಜೊಲ್ಫಾಘರಿ ಮತ್ತು ಅಮಿರ್‌ಹೊಸೇನ್ ಫೆಖಿ ಸೇರಿದ್ದಾರೆ.