JDS Protest: 'ಜೆಡಿಎಸ್ ಪಕ್ಷದಿಂದ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ' ಅಭಿಯಾನ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ
ರಾಜ್ಯರಾಜಕೀಯ


ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ದರ ಏರಿಕೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಜೆಡಿಎಸ್ ಪಕ್ಷವು, ಸರಕಾರದ ವಿರುದ್ಧ ವಿನೂತನ ಅಭಿಯಾನ ಆರಂಭಿಸಿದೆ.
ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ 'ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ' ಎಂಬ ಅಭಿಯಾನ ಆರಂಭ ಮಾಡಿದ್ದು, ಈ ಅಭಿಯಾನ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಅಲ್ಲದೆ, ಅಭಿಯಾನದ ಬಗ್ಗೆ ಪಕ್ಷ ಕಚೇರಿ ಜೆಪಿ ಭವನದಲ್ಲಿ ಮಾಹಿತಿ ನೀಡಿದ ನಿಖಿಲ್ ಕುಮಾರಸ್ವಾಮಿ ಅವರು; https://www.saakappasaaku.com ಎಂಬ ನೂತನ ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಿದರು. ಈ ವೆಬ್ ತಾಣದಲ್ಲಿ ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ, ರಾಜ್ಯದ ಯಾರೇ ಆದರೂ ನೋಂದಣಿ ಮಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಜನರ ಮೇಲೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ. ಆರ್ಥಿಕವಾಗಿ ರಾಜ್ಯವನ್ನು ವಿಕೋಪದ ಪರಿಸ್ಥಿತಿಗೆ ದೂಡಿರುವ ಕಾಂಗ್ರೆಸ್ ಸರಕಾರವು, ರಾಜ್ಯದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಸೃಷ್ಟಿಸಿದೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ನಾಡಿನ ಜನರನ್ನು ಕಾಂಗ್ರೆಸ್ ಸರ್ಕಾರ ಇನ್ನಿಲ್ಲದ ಸಂಕಷ್ಟಕ್ಕೆ ದೂಡಿದೆ. ನಿರಂತರವಾಗಿ ಶೋಷಣೆ ಮಾಡುತ್ತಿದೆ. ಜನರು ರೋಸಿ ಹೋಗಿದ್ದಾರೆ. ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕು. ಅದಕ್ಕೆ ನಾವು ಹೋರಾಟಕ್ಕೆ ಧುಮುಕಿದ್ದೇವೆ. ನಾವು 'ಸಾಕಪ್ಪಾ ಸಾಕು ಕಾಂಗ್ರೆಸ್ ಸರ್ಕಾರ ಸಾಕು' ಎಂಬ ಅಭಿಯಾನ ಶುರು ಮಾಡಿದ್ದೇವೆ ಎಂದು ಅವರು ತಿಳಿಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ:
ಶನಿವಾರ ಫ್ರೀಡಂ ಪಾರ್ಕ್‌ನಲ್ಲಿ ದೊಡ್ಡ ಹೋರಾಟ ಇರಲಿದೆ ಕುಮಾರಣ್ಣ ಅವರ ನೇತೃತ್ವದಲ್ಲಿ ಅಭಿಯಾನದ ಮೂಲಕ ಪ್ರತಿಭಟನೆ ಮಾಡ್ತೀವಿ.ಕುಮಾರಣ್ಣ ಅವರು ಪ್ರತಿಭಟನೆಯಲ್ಲಿ ಭಾಗಿಯಾಗ್ತಾರೆ.ನಿರಂತರವಾಗಿ ಈ ಅಭಿಯಾನವನ್ನ ಜೆಡಿಎಸ್ ಮಾಡುತ್ತೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳಿಂದ ಇಲ್ಲಿವರೆಗೂ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಹಂತ ಹಂತವಾಗಿ ಯಾವುದಾದರು ಒಂದು ರೀತಿ ಜನರ ಮೇಲೆ ಬೆಲೆ ಏರಿಕೆ ಮಾಡಿದೆ. ನಾಡಿನ ಜನರಿಗೆ ಸಂಕಷ್ಟದ ದಿನ ಎದುರಿಸಲು ಸರ್ಕಾರ ದೂಡಿದೆ. ಈ ಹಿನ್ನಲೆಯಲ್ಲಿ ದೊಡ್ಡ ಚರ್ಚೆಗಳು ರಾಜ್ಯದಲ್ಲಿ ಆಗ್ತಿದೆ. ಜೆಡಿಎಸ್ ಪಕ್ಷ ಕೂಡಾ ಪ್ರತಿಯೊಬ್ಬ ಕನ್ನಡರ ಭಾವನೆ ಹೊರಗೆ ಹಾಕೋ ಕೆಲಸ ಮಾಡ್ತಿದೆ ಎಂದು ಅವರು ತಿಳಿಸಿದರು.
ಇಂದು ಬೆಳಗ್ಗೆಯಿಂದ ನಮ್ಮ ಕಾರ್ಯಕರ್ತರು ಕುಮಾರಣ್ಣನ ಅವರ ಸಲಹೆ ಮತ್ತು ಸೂಚನೆ ಪಡೆದುಕೊಂಡು ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಭಿಯಾನ ಇವತ್ತಿಂದ ಪ್ರಾರಂಭ ಮಾಡಿದ್ದೇವೆ. ಏಳೂವರೆ ಕೋಟಿ ಜನರ ಭಾವನೆ ಸಾಕಪ್ಪ ಸಾಕು ಅಂತ ಇದೆ ಎಂದು ತಿಳಿಸಿದರು.