ಕುಷ್ಠರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿ: ಎಡಿಸಿ ಸೈಯಿದಾ ಆಯಿಷಾ

ಸ್ಥಳೀಯ ಸುದ್ದಿ

ಧರ್ಮ ಬಸವನಪುರ.

10/23/20251 min read

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನವನ್ನು ನವೆಂಬರ್ 03 ರಿಂದ 11 ವರೆಗೆ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಅಭಿಯಾನ ಯಶಸ್ವಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಸೈಯಿದಾ ಆಯಿಷಾ ಅವರು ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಕುಷ್ಠ ರೋಗ ಪತ್ತೆ ಹಚ್ಚುವ ಅಭಿಯಾನದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು,

ಸಭೆಯಲ್ಲಿ ಅವರು ಮಾತನಾಡಿ, ಮನುಷ್ಯನ ಆರೋಗ್ಯಕ್ಕೆ ಸಂಬಂಧಿಸಿದಂತೆ ಕುಷ್ಠರೋಗವು ಒಂದು ಬಾಧಿತ ರೋಗವಾಗಿದ್ದು, ಕುಷ್ಠರೋಗ ಮುಕ್ತ ಸಮಾಜ ನಿರ್ಮಿಸಲು ಅಧಿಕಾರಿಗಳು ನಿರಂತರ ಕಾರ್ಯ ಪ್ರವೃತ್ತರಾಗಿರಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹೇಳಿದರು.

ಆರೋಗ್ಯ ಇಲಾಖೆ ಜೊತೆಗೆ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ವಯಂ ಸೇವಾ ಸಂಸ್ಥೆಗಳು ಸಾರ್ವಜನಿಕರಿಗೆ ಅರಿವು ಮೂಡಿಸಿ. ಎಲ್ಲಾ ಇಲಾಖೆಗಳ ಸಹಕಾರ ಮತ್ತು ಸಮನ್ವಯತೆಯಿಂದ ಕುಷ್ಠರೋಗ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ 20 ಸಕ್ರಿಯ ಪ್ರಕರಣಗಳು

ಕುಷ್ಠರೋಗ ಹೊಂದಿರುವ ಮತ್ತು ಕುಷ್ಠರೋಗದಿಂದ ಅಂಗವಿಕಲತೆಗೆ ಬಾಧಿತರಾದವರು ಸೇರಿದಂತೆ ಒಟ್ಟು 20 ಸಕ್ರಿಯ ಪ್ರಕರಣಗಳು ದಾಖಲಾಗಿವೆ.

ಕುಷ್ಠರೋಗವು ಮೈಕೊಬ್ಯಾಕ್ಟಿರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದ್ದು, ಇದು ಮುಂದೆ ನರಗಳ ಹಾಗೂ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಆರಂಭದಲ್ಲಿ ಚರ್ಮದ ಮೇಲೆ ಮಚ್ಚೆಗಳು ಉಲ್ಬಣವಾಗುವುದು, ಚರ್ಮದ ಬಣ್ಣ ತಿಳಿ ಬಿಳಿ ಅಥವಾ ತಾಮ್ರ ಬಣ್ಣಕ್ಕೆ ತಿರುಗುವುದು ಇತ್ಯಾದಿ.

ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಲಕ್ಕಾ ಕೃಷ್ಣಾರೆಡ್ಡಿ, ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ನಾಗರಾಜು ಎಂ.ಜಿ, ಜಿಲ್ಲಾ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಡಾ. ಶಾಲಿನಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಗೋವಿಂದ್ ರಾಜು, ನಾಲ್ಕು ತಾಲ್ಲೂಕಿನ ಹಿರಿಯ ನಿರೀಕ್ಷಣ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.